ಬೆಂಗಳೂರು : ವಿದ್ಯಾರ್ಥಿನಿಯರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಹಿಸುದ್ದಿ ನೀಡಿದ್ದು, ‘ನನ್ನ ಮೈತ್ರಿ’ ಮುಟ್ಟಿನ ಕಪ್’ ಯೋಜನೆ ಇಂದಿನಿಂದ ಈ ಜಿಲ್ಲೆಗಳಲ್ಲಿ ಜಾರಿಯಾಗಲಿದೆ.
ಹೆಣ್ಣು ಮಕ್ಕಳಲ್ಲಿ ಮುಟ್ಟಿನ ನಿರ್ವಹಣೆಗೆ ಸೂಕ್ತ ಸಾಧನವಾಗಿರುವ ಹಾಗೂ ಮರುಬಳಕೆ ಮಾಡಬಹುದಾದ ಈ ಮುಟ್ಟಿನ ಕಪ್ಗಳ ಬಗ್ಗೆ ಮಾಹಿತಿ ನೀಡಿ, ಇವುಗಳ ಬಳಕೆಯನ್ನು ಪ್ರೋತ್ಸಾಹಿಸಲು ಉದ್ದೇಶಿಸಲಾಗಿದೆ. ಬಜೆಟ್ ನಲ್ಲಿ ಘೋಷಿಸಿದಂತೆ ಶಾಲೆ-ಕಾಲೇಜು ತರುಣಿಯರಿಗೆ ಉಚಿತ ನ್ಯಾಪಕಿನ್ ವಿತರಿಸುವ ‘ಶುಚಿ’ ಯೋಜನೆ ಪುನರಾರಂಭಿಸಲಾಗುತ್ತಿದೆ.
ಮಂಗಳೂರಿನ ನೆಹರು ಮೈದಾನದಲ್ಲಿ ಇಂದು ಸೋಮವಾರ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ‘ನನ್ನ ಮೈತ್ರಿ’ ಯೋಜನೆಗೆ ದಿನೇಶ್ ಗುಂಡೂರಾವ್ ಚಾಲನೆ ನೀಡಲಿದ್ದಾರೆ. ‘ನನ್ನ ಮೈತ್ರಿ’ ಹೆಸರಿನಡಿ ದಕ್ಷಿಣಕನ್ನಡ ಮತ್ತು ಚಾಮರಾಜನಗರ ಜಿಲ್ಲೆಗಳ 15 ಸಾವಿರ ಪದವಿ ಪೂರ್ವ ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್ಗಳನ್ನು ವಿತರಿಸಲು ನಿರ್ಧರಿಸಲಾಗಿದೆ.
ಸ್ಯಾನಿಟರಿ ನ್ಯಾಪ್ಕಿನ್ಗೆ ಪರ್ಯಾಯವಾಗಿ ಮುಟ್ಟಿನ ಕಪ್ ಬಳಕೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ ಹಿನ್ನೆಲೆ ಎರಡು ಜಿಲ್ಲೆಗಳ ಹಂತಕ್ಕೆ ಪ್ರಯೋಗಿಸಲಾಗುತ್ತಿದೆ. ದಿನಕ್ಕೆ ಎಂಟು ತಾಸು ಈ ಕಪ್ ಬಳಕೆ ಮಾಡಬಹುದಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ರಾಜ್ಯಾದ್ಯಂತ ವಿಸ್ತರಣೆಗೆ ಚಿಂತನೆ ನಡೆಸಲಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.