ಶಿವಮೊಗ್ಗ : ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಹಕಾರ ಸಂಘಗಳನ್ನು ವಿಲೀನಗೊಳಿಸಿ, ಪಂಚಾಯಿತಿಗೊಂದರಂತೆ ಸಂಘಗಳನ್ನು ಸ್ಥಾಪಿಸಿ, ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು ಎಂದು ರಾಜ್ಯ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಹೇಳಿದರು.
ಸಾಗರದ ಅಡಿಕೆ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘವು ಸ್ಥಳೀಯ ಈಡಿಗರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಅನೇಕ ಸಮಸ್ಯೆ-ಸವಾಲುಗಳ ನಡುವೆಯೂ ಸಾಗರದ ಅಡಿಕೆ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘವು ಸವೆಸಿದ ಹಾದಿ ದೀರ್ಘವಾಗಿದ್ದು, ಯಶಸ್ವಿಗೊಂಡು ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಹರ್ಷದ ಸಂಗತಿ ಎಂದ ಅವರು, ಅದಕ್ಕೆ ಕಾರಣಕರ್ತರಾದ ನೌಕರರು ಮತ್ತು ಸಿಬ್ಬಂಧಿಗಳ ಶ್ರಮ ಅಭಿನಂದನೀಯ ಎಂದವರು ನುಡಿದರು.
ಪ್ರಸ್ತುತ ಸಂದರ್ಭದಲ್ಲಿ ಅಡಿಕೆ ಬೆಳೆಯ ಕ್ಷೇತ್ರ ವ್ಯಾಪ್ತಿ ದಿನೇದಿನೇ ವಿಸ್ತರಣೆಯಾಗುತ್ತಿದ್ದು ಬೆಳೆ ನಿಯಂತ್ರಣ ಅಸಾಧ್ಯ ಎನ್ನುವಂತಾಗಿದೆ. ಒಂದೆಡೆ ರೈತರು ಖರೀದಿಸುವ ವಸ್ತುಗಳ ಬೆಲೆ ಹೆಚ್ಚಳವಾಗುತ್ತಿದ್ದರೆ, ಮತ್ತೊಂದೆಡೆ ರೈತರ ಕೃಷಿ ಉತ್ಪನ್ನಗಳ ಬೆಲೆ ಕನಿಷ್ಟ ಹಂತ ತಲುಪಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದರು.
ಸಹಕಾರಿ ಸದಸ್ಯರು ಸಂಘದಲ್ಲಿ ಹೆಚ್ಚಿನ ಠೇವಣಿ ಇಡಬೇಕು ಹಾಗೂ ಕಡಿಮೆ ಸಾಲ ಪಡೆದುಕೊಳ್ಳಬೇಕು. ಅಗತ್ಯವಿರುವವರು ಸರಕಾರದಿಂದ ದೊರೆಯುವ ಕನಿಷ್ಟ ಬಡ್ಡಿದರದ ಸಾಲಸೌಲಭ್ಯಗಳನ್ನು ಪಡೆದು ಜೀವನ ಗುಣಮಟ್ಟವನ್ನು ಸುಧಾರಿಸಿಕೊಳ್ಳಲು ಮುಂದಾಗಬೇಕು. ಇದು ರೈತರ ಆರ್ಥಿಕಾಭಿವೃದ್ಧಿ ಹಾಗೂ ಸ್ವಾವಲಂಬಿ ಬದುಕಿಗೆ ಆಸರೆಯಾಗಲಿದೆ ಎಂದರು.
ಸಹಕಾರಿ ಚಳುವಳಿ eನಾಂದೋಲನವಾಗಿ ರೂಪುಗೊಳ್ಳಬೇಕು. ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಹಕಾರ ಸಂಘಗಳನ್ನು ವಿಲೀನಗೊಳಿಸಿ, ಪಂಚಾಯಿತಿಗೊಂದರಂತೆ ಸಂಘಗಳನ್ನು ಸ್ಥಾಪಿಸಿ, ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು ಎಂದರು.
ಸಹಕಾರ ಚಳುವಳಿಯ ಉನ್ನತಿಗಾಗಿ ಸರ್ವ ಸಹಕಾರಿಗಳು ಸಂಕಲ್ಪ ಮಾಡಬೇಕಾದ ಸಂದರ್ಭ ಇದಾಗಿದೆ ಎಂದ ಅವರು ಅಡಿಕೆ ಬೆಳೆಗೆ ಅಲ್ಲಲ್ಲಿ ಕಂಡು ಬಂದಿರುವ ಎಲೆಚುಕ್ಕೆ ರೋಗಕ್ಕೆ ಅಗತ್ಯವಿರುವ ಔಷಧವನ್ನು ಸಹಾಯಧನದೊಂದಿಗೆ ಒದಗಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದರು.