ಬೆಂಗಳೂರು : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಸಿಹಿಸುದ್ದಿ ನೀಡಿದ್ದು, ಕೃಷಿಕರಿಗೆ ಬರಪರಿಸ್ಥಿತಿಯಲ್ಲಿ ನೆರವಾಗುವ ನಿಟ್ಟಿನಲ್ಲಿ 106 ಬರಪೀಡಿತ ತಾಲೂಕುಗಳಲ್ಲಿ 16,065 ಕೃಷಿಹೊಂಡಗಳನ್ನು ನಿರ್ಮಾಣ ಮಾಡಲು ಮುಂದಾಗಿದೆ.
ಈ ಕುರಿತು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದು, ಪ್ರಸಕ್ತ ವರ್ಷ ನಾಡನ್ನು ತೀವ್ರತರವಾದ ಬರ ಕಾಡುತ್ತಿದ್ದು, ನೀರಿಲ್ಲದೆ ಬೆಳೆದ ಬೆಳೆ ನಷ್ಟವಾಗಿ ಅನ್ನದಾತರು ಸಂಕಷ್ಟದಲ್ಲಿ ಬದುಕು ನಡೆಸುವಂತಾಗಿದೆ. ರೈತರ ನೆರವಿಗೆ ಧಾವಿಸುವ ಉದ್ದೇಶದಿಂದ ಕೃಷಿಭಾಗ್ಯ ಯೋಜನೆಗೆ ಮರುಚಾಲನೆ ನೀಡಲಾಗಿದೆ, 19 ಲಕ್ಷ ರೈತರಿಗೆ ರೂ. 1,500 ಕೋಟಿ ಬೆಳೆವಿಮೆ ವಿತರಿಸಲಾಗಿದೆ, 45,643 ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಸೌಲಭ್ಯ ಅಳವಡಿಕೆ ಮಾಡಲಾಗಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಕ್ರಮವಹಿಸಲು ಜಿಲ್ಲಾಧಿಕಾರಿಗಳ ಬ್ಯಾಂಕ್ ಖಾತೆಗೆ ಹಣದ ವರ್ಗಾವಣೆ ಮಾಡಲಾಗಿದ್ದು, ಬರದ ಸಂಕಷ್ಟದಿಂದ ರೈತರನ್ನು ಕಾಪಾಡಲು ನಮ್ಮ ಗರಿಷ್ಠ ನೆರವು ನೀಡುತ್ತಿದ್ದೇವೆ ಎಂದಿದ್ದಾರೆ.
ಕಳೆದ 6 ತಿಂಗಳ ಅವಧಿಯಲ್ಲಿ ನಾಡಿನ ಜನತೆಗೆ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಗ್ಯಾರಂಟಿ ಯೋಜನೆಗಳು ಸೇರಿದಂತೆ ಎಲ್ಲ ಅಭಿವೃದ್ಧಿ ಕಾರ್ಯಕ್ರಮಗಳ ಜಾರಿ ಮತ್ತು ಸಮಾಜದ ಶಾಂತಿ-ಸಾಮರಸ್ಯದ ರಕ್ಷಣೆ ನಮ್ಮ ಸರ್ಕಾರದ ಪ್ರಮುಖ ಉದ್ದೇಶವಾಗಿದೆ ಎಂದರು.