ಶಿವಮೊಗ್ಗ : ಭತ್ತ ನಾಟಿಗೆ ಸಜ್ಜಾಗಿದ್ದ ರೈತರಿಗೆ ಸಿಹಿಸುದ್ದಿ, ಇಂದಿನಿಂದ 100 ದಿನ ಭದ್ರಾ ಕಾಲುವೆಗೆ ನೀರು ಬಿಡುಗಡೆ ಮಾಡಲು ಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಲಕ್ಕವಳ್ಳಿ ಸಮೀಪದ ಭದ್ರಾ ಜಲಾಶಯದ ಐಬಿಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆದಿದ್ದು, ನೀರು ಹರಿಸಲು ತೀರ್ಮಾನಿಸಲಾಗಿದೆ.
ಮುಂಗಾರು ಮಳೆ ಕೈಕೊಟ್ಟ ಕಾರಣ ರೈತರು ಕಂಗಾಲಾಗಿದ್ದರು. ಭತ್ತ ನಾಟಿಗೆ ಸಜ್ಜಾಗಿದ್ದ ರೈತರಿಗೆ ಸಲಹಾ ಸಮಿತಿ ಸಂತಸದ ಸುದ್ದಿ ಕೊಟ್ಟಿದೆ. ದಾವಣಗೆರೆ, ಶಿವಮೊಗ್ಗ ಜಿಲ್ಲೆಯ ರೈತರ ಅನುಕೂಲಕ್ಕಾಗಿ ನೀರು ಬಿಡುಗಡೆ ಮಾಡಲಾಗುವುದು.
ಇಂದಿನಿಂದ 100 ದಿನ ಭದ್ರಾ ಡ್ಯಾಮ್ ನಿಂದ ನೀರು ಬಿಡುಗಡೆ ಮಾಡಲಾಗುವುದು. ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ, ಅಧೀಕ್ಷಕ ಇಂಜಿನಿಯರ್ ಎನ್. ಸುಜಾತ ನೀರು ಬಿಡುಗಡೆಗೆ ಕ್ರಮಕೈಗೊಂಡಿದ್ದಾರೆ. ಕಾಲುವೆಗಳಿಗೆ ನೀರು ಬಿಡುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದ್ದರು. ದಾವಣಗೆರೆ ಜಿಲ್ಲೆಯ ಬಹುತೇಕ ಕಡೆ ಅನ್ನದಾತರು ಪ್ರತಿಭಟನೆ ನಡೆಸಿದ್ದರು.