ಸಾಗರ : ಶೀಘ್ರವೇ ರಾಜ್ಯದ ಪ್ರತಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಒಂದೊಂದು ಕೃಷಿ ಪತ್ತಿನ ಸಹಕಾರ ಸಂಘವನ್ನು ಪ್ರಾರಂಭಿಸುವ ಗುರಿ ಹೊಂದಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರುವ ಡಿಸೆಂಬರ್ ನೊಳಗೆ ಪ್ರತಿ ಗ್ರಾಮಪಂಚಾಯಿತಿಯಲ್ಲೂ ಕೃಷಿ ಪತ್ತಿನ ಸಹಕಾರ ಸಂಘ ಪ್ರಾರಂಭಿಸಲಾಗುವುದು. ಸಹಕಾರಿ ಸಂಸ್ಥೆ ಮೂಲಕ ರೈತರಿಗೆ ಬೇಕಾದ ಸೌಲಭ್ಯ ಒದಗಿಸಲಾಗುವುದು ಎಂದು ಹೇಳಿದ್ದಾರೆ.
ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವವರು ಪಕ್ಷಾತೀತಾವಾಗಿ ಇರಬೇಕು. ಹಕ್ಕು ಚಲಾಯಿಸುವುದರ ಜೊತೆಗೆ ಕರ್ತವ್ಯವನ್ನು ಪಾಲನೆ ಮಾಡಬೇಕು. ಸಹಕಾರಿ ಸಂಸ್ಥೆಗಳು ಠೇವಣಿಯನ್ನು ಜಾಸ್ತಿ ಮಾಡಿಕೊಂಡು ಬೇರೆಡೆಯಿಂದ ಸಾಲ ತರುವುದನ್ನು ಕಡಿಮೆ ಮಾಡಿಕೊಳ್ಳಬೇಕು. ಆಗ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಬಹುದು ಎಂದು ತಿಳಿಸಿದ್ದಾರೆ.