ಭುವನೇಶ್ವರ: ಎಲೆಕ್ಟ್ರಿಕ್ ವಾಹನ ಖರೀದಿಸಲು ಯೋಜಿಸುತ್ತಿದ್ದೀರಾ? ಹಾಗಿದ್ದರೆ ಒಡಿಶಾದಲ್ಲಿ ನೆಲೆಸಿರುವವರಿಗೆ ಇಲ್ಲಿದೆ ಗುಡ್ ನ್ಯೂಸ್. ಎಲೆಕ್ಟ್ರಿಕ್ ವಾಹನಗಳ ಖರೀದಿಗೆ 15 ಶೇಕಡಾ ಸಬ್ಸಿಡಿಯನ್ನು ನೀಡುವುದಾಗಿ ಒಡಿಶಾ ಸರ್ಕಾರ ಘೋಷಿಸಿದೆ.
ದ್ವಿಚಕ್ರ ವಾಹನಗಳಿಗೆ, ಸಬ್ಸಿಡಿ ವೆಚ್ಚದ 15 ಶೇಕಡಾ ಅಂದ್ರೆ ಗರಿಷ್ಠ 5,000 ರೂ. ತ್ರಿಚಕ್ರ ವಾಹನಗಳಿಗೆ 15 ಶೇ. ಸಬ್ಸಿಡಿಯ ಮಿತಿ 10,000 ರೂ. ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಇದು 50,000 ರೂ.ವರೆಗೆ ಇರಲಿದೆ. ನೀತಿ ಆಯೋಗದ ಸಲಹೆ ಮೇರೆಗೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಒಡಿಶಾ ಎಲೆಕ್ಟ್ರಿಕ್ ವೆಹಿಕಲ್ ಪಾಲಿಸಿ 2021 ರ ಪ್ರಕಾರ ಜನವರಿ 31 ರಂದು ವಾಣಿಜ್ಯ ಮತ್ತು ಸಾರಿಗೆ ಇಲಾಖೆ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಸಬ್ಸಿಡಿಯು ಸೆಪ್ಟೆಂಬರ್ 1, 2021 ರಿಂದ ಜಾರಿಯಲ್ಲಿರುತ್ತದೆ. ವಾಹನವನ್ನು ನೋಂದಾಯಿಸಿದ ಆರ್ ಟಿ ಒ ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಮೊತ್ತವನ್ನು ಜಮಾ ಮಾಡಲಾಗುತ್ತದೆ. ಈ ಯೋಜನೆಯು ಡಿಸೆಂಬರ್ 31, 2025 ರವರೆಗೆ ಜಾರಿಯಲ್ಲಿರುತ್ತದೆ.
ಮಾರಾಟ, ಖರೀದಿ ಪ್ರೋತ್ಸಾಹದ ಕ್ರೆಡಿಟ್ ಮತ್ತು ಸಾಲಗಳ ಮೇಲಿನ ಸಬ್ಸಿಡಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಮೇಲ್ವಿಚಾರಣೆ ಮಾಡಲು ಮೀಸಲಾದ ವೆಬ್ ಪೋರ್ಟಲ್ ಅನ್ನು ಸ್ಥಾಪಿಸಲಾಗುವುದು. ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಎಲ್ಲಾ ವರ್ಗದ ಎಲೆಕ್ಟ್ರಿಕ್ ವಾಹನಗಳ ನೋಂದಣಿ ಶುಲ್ಕ ಮತ್ತು ಮೋಟಾರು ವಾಹನ ತೆರಿಗೆ ವಿನಾಯಿತಿಯನ್ನು ಸರ್ಕಾರ ಘೋಷಿಸಿತ್ತು.