ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯಡಿ ಆಗಸ್ಟ್ 31 ರೊಳಗೆ ಅರ್ಜಿ ಸಲ್ಲಿಸಿ ಈವರೆಗೆ ಹಣ ಬಾರದೆ ಇರುವ ಯಜಮಾನಿಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಿಹಿಸುದ್ದಿ ನೀಡಿದ್ದು, ಕೆಲ ದಾಖಲೆಗಳನ್ನು ಸರಿಪಡಿಸಿ ಒಂದೇ ಸಲ 3 ಕಂತಿನ 6 ಸಾವಿರ ರೂಪಾಯಿಗಳನ್ನು ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಕಳೆದ ತಿಂಗಳು ರಾಜ್ಯಾದ್ಯಂತ 1.10 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಡಿ 2,000 ರೂ. ವರ್ಗಾವಣೆ ಮಾಡಲಗಿದೆ. ಆದರೆ ಕೆಲವು ಮಹಿಳೆಯರಿಗೆ ಹಣ ವರ್ಗಾವಣೆ ಆಗಿಲ್ಲ ಎಂಬ ದೂರುಗಳು ಬರುತ್ತಿವೆ. ಇ-ಕೆವೈಸಿ, ತಾಂತ್ರಿಕ ಸಮಸ್ಯೆ, ಬ್ಯಾಂಕ್ ಖಾತೆ ಸೇರಿ ಯಾವೆಲ್ಲಾ ತಪ್ಪುಗಳಿದ್ದಾವೋ ಅವುಗಳನ್ನು ಸರಿಪಡಿಸಿ ಈ ತಿಂಗಳು ಖಾತೆಗೆ ಹಣ ಜಮೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಿದ್ರೂ ಯಾರಿಗೆ ಹಣ ಬಂದಿಲ್ಲೋ ಅವರಿಗೆ ಒಂದೇ ಸಲ ಹಣ ವರ್ಗಾವಣೆ ಮಾಡಲಾಗುತ್ತದೆ. ಆಗಸ್ಟ್ 31 ರೊಳಗೆ ಅರ್ಜಿ ಸಲ್ಲಿಸಿದ್ರೆ 3 ಕಂತು, ಆಗಸ್ಟ್ ನಂತರ ಅರ್ಜಿ ಸಲ್ಲಿಸಿದವರಿಗೆ 2 ಕಂತು ಒಂದೇ ಸಲ ಬರಲಿದೆ. ಹೆಸರು ತಪ್ಪಾಗಿದ್ರೆ, ಫೋನ್ ನಂಬರ್ ಬೇರೆ ಯಾಗಿದ್ರೆ ಹಣ ಜಮೆ ಆಗಿಲ್ಲ. ಇವುಗಳನ್ನು ಸರಿಪಡಿಸಿಕೊಂಡು ಗೃಹಲಕ್ಷ್ಮಿ ಹಣವನ್ನು ಪ್ರತಿ ತಿಂಗಳು 15 ರಿಂದ 20 ನೇ ದಿನಾಂಕದೊಳಗೆ ಹಣ ವರ್ಗಾವಣೆ ಮಾಡಲಾಗುವುದು ಎಂದು ಹೇಳಿದ್ದಾರೆ.