ಬೆಳಗಾವಿ : ಬರ ಸಂಕಷ್ಟದಲ್ಲಿರುವ ರಾಜ್ಯದ ರೈತರಿಗೆ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಕೃಷಿ ಭಾಗ್ಯ ಯೋಜನೆಯನ್ನು ಮರು ಜಾರಿಗೊಳಿಸಲಾಗುತ್ತಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಬರ ಪರಿಸ್ಥಿತಿ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವ ದೃಷ್ಟಿಯಿಂದ ಕೃಷಿಭಾಗ್ಯ ಯೋಜನೆಯನ್ನು ಮರು ಜಾರಿಗೊಳಿಸುತ್ತಿದ್ದೇವೆ. ಈಗಾಗಲೇ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.
ಇನ್ನು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ 2023ರ ಮುಂಗಾರು ಹಂಗಾಮಿನ ಬೆಳೆ ಕಟಾವು ಪ್ರಯೋಗಗಳು ಅಂತಿಮ ಹಂತದಲ್ಲಿದ್ದು ಬೆಳೆ ಕಟಾವು ಪ್ರಯೋಗಗಳ ಅಂತಿಮ ಇಳುವರಿ ಆಧಾರದ ಮೇಲೆ ಇಳುವರಿ ಕೊರತೆಗಣುಗುಣವಾಗಿ ಬೆಳೆ ವಿಮೆ ಪರಿಹಾರ ಲೆಕ್ಕಚಾರ ಮಾಡಿ ವಿಮಾ ಸಂಸ್ಥೆಯವರಿಂದ ಕಾಲಮಿತಿಯಲ್ಲಿ ಇತ್ಯರ್ಥಪಡಿಸಲು ಕ್ರಮ ಜರುಗಿಸಲಾಗುತ್ತಿದೆ ಎಂದು ಕೃಷಿ ಸಚಿವರಾದ ಚೆಲುವರಾಯಸ್ವಾಮಿ ತಿಳಿಸಿದ್ದಾರೆ.
ಈ ಹಿಂದೆ 2013-18ರ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಜಾರಿ ಮಾಡಲಾಗಿದ್ದ ಈ ಮಹತ್ವದ ಯೋಜನೆಯನ್ನು ಮರು ಜಾರಿ ಮಾಡಲು ಸಿದ್ಧತೆ ನಡೆಸಲಾಗಿದೆ.
ಕೃಷಿ ಭಾಗ್ಯ ಯೋಜನೆ
ಮಳೆ ನೀರಿನ ಸಮರ್ಪಕ ನಿರ್ವಹಣೆ ಮತ್ತು ಉಪಯುಕ್ತ ಬಳಕೆ ಮೂಲಕ ಉತ್ಪಾದಕತೆ ಹೆಚ್ಚಿಸುವುದು, ಕೃಷಿ ಆದಾಯ ಹೆಚ್ಚಿಸುವುದು ಹಾಗೂ ಮಳೆ ನೀರು ವ್ಯರ್ಥವಾಗದಂತೆ ಆಯ್ದ ಸ್ಥಳಗಳಲ್ಲಿ ಕೃಷಿ ಹೊಂಡ ನಿರ್ಮಿಸಿ ರಕ್ಷಣಾತ್ಮಕ ನೀರಾವರಿ ಸೌಲಭ್ಯ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಕ್ಷೇತ್ರ ಬದು ನಿರ್ಮಾಣ, ನೀರು ಸಂಗ್ರಹಣೆಗೆ ಹೊಂಡ ನಿರ್ಮಾಣ, ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆ ಅಳವಡಿಸುವುದು, ಹೊಂಡದಿಂದ ನೀರು ಎತ್ತಲು ಡೀಸೆಲ್ ಪಂಪ್‌ಸೆಟ್ ಪೂರೈಕೆ, ನೀರನ್ನು ಬೆಳೆಗೆ ಹಾಯಿಸಲು ಲಘು ನೀರಾವರಿ ಘಟಕ ಪೂರೈಕೆ ಹಾಗೂ ಹೊಂಡದ ಸುತ್ತಲೂ ತಂತಿ ಬೇಲಿ ನಿರ್ಮಾಣವನ್ನು ಈ ಯೋಜನೆ ಒಳಗೊಂಡಿದೆ.