ಬೆಂಗಳೂರು : ರಾಜ್ಯ ಸರ್ಕಾರವು ವಿಚ್ಚೇದಿತ ಹಾಗೂ ಅವಿವಾಹಿತ ಮಹಿಳೆಯರಿಗೆ ಸಿಹಿಸುದ್ದಿ ನೀಡಿದ್ದು, ಮನಸ್ವಿನಿ ಯೋಜನೆಯಡಿ ಮಾಸಿಕ 500 ರೂ. ನೀಡಲು ಮುಂದಾಗಿದೆ.
ಈ ಕುರಿತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದು, 40 ವರ್ಷದಿಂದ 64 ವರ್ಷದೊಳಗಿನ ವಿಚ್ಚೇದಿತ ಮತ್ತು ಅವಿವಾಹಿತ ಮಹಿಳೆಯರ ಸ್ವಾವಲಂಬಿ ಬದುಕಿಗೆ ಬೆಂಬಲವಾಗಿ ನಿಲ್ಲಬೇಕೆಂಬ ಉದ್ದೇಶದೊಂದಿಗೆ 2013ರಲ್ಲಿ ನಮ್ಮ ಸರ್ಕಾರವು ಮನಸ್ವಿನಿ ಯೋಜನೆಯನ್ನು ಜಾರಿಗೆ ತಂದಿತ್ತು. ಬಡತನರೇಖೆಗಿಂತ ಕೆಳಗಿರುವ ವಿಚ್ಚೇದಿತ ಮತ್ತು ಅವಿವಾಹಿತ ಮಹಿಳೆಯರಿಗೆ ಮಾಸಿಕ ರೂ.500 ಮಾಸಾಶನ ನೀಡುವ ಈ ಯೋಜನೆಗೆ ಪಸಕ್ತ ಬಜೆಟ್ ನಲ್ಲಿ ರೂ.138 ಕೋಟಿ ಅನುದಾನವನ್ನು ನೀಡಲಾಗಿದೆ ಎಂದಿದ್ದಾರೆ.
ಸ್ತ್ರೀ ಶಕ್ತಿ ಆರಾಧನೆಯ ಈ ನವರಾತ್ರಿಯ ಶುಭ ಸಂದರ್ಭದಲ್ಲಿ ನಮ್ಮ ಸರ್ಕಾರವು ಮಹಿಳಾ ಸಬಲೀಕರಣಕ್ಕೆ ಬದ್ಧವಾಗಿದ್ದು, ಮಹಿಳೆಯರ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿದೆ ಎಂದು ತಿಳಿಸಿದ್ದಾರೆ.