ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವವರಿಗೆ ರಾಜ್ಯ ಸರ್ಕಾರ ಶುಭ ಸುದ್ದಿ ನೀಡಲು ಮುಂದಾಗಿದೆ. ಜಾನುವಾರುಗಳಿಗೂ ವಿಮೆ ಸೌಲಭ್ಯ ಕಲ್ಪಿಸಲು ಚಿಂತನೆ ನಡೆಸಲಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲು ಸಿದ್ಧತೆ ಕೈಗೊಂಡಿದೆ.
ಮೈಸೂರಿನ ಜೆ.ಕೆ. ಮೈದಾನದಲ್ಲಿ ಶನಿವಾರದಂದು ನಡೆದ ರೈತ ದಸರಾ ಉದ್ಘಾಟಿಸಿ ಮಾತನಾಡಿದ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಈ ವಿಷಯ ತಿಳಿಸಿದ್ದು, ಜಾನುವಾರುಗಳಿಗೆ ವಿಮೆ ಸೌಲಭ್ಯ ಕಲ್ಪಿಸುವ ಯೋಜನೆ ಆರಂಭಿಸುವ ಕುರಿತಂತೆ ಪಶು ಸಂಗೋಪನಾ ಸಚಿವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ.
ಹಳ್ಳಿಕಾರ್ ತಳಿಯ ಹಸುಗಳು ಸೇರಿದಂತೆ ಕೆಲವೊಂದು ಜಾನುವಾರುಗಳು 8 ರಿಂದ 10 ಲಕ್ಷ ರೂಪಾಯಿ ಮೌಲ್ಯವನ್ನು ಹೊಂದಿದ್ದು, ಅವುಗಳು ಸತ್ತಾಗ ರೈತರಿಗೆ ಭಾರಿ ನಷ್ಟವಾಗುತ್ತಿದೆ. ಹೀಗಾಗಿ ಅವುಗಳಿಗೆ ವಿಮೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟ ಸಚಿವ ಚಲುವರಾಯಸ್ವಾಮಿ, ಜಾನುವಾರುಗಳಿಗೆ ವಿಮೆ ಸೌಲಭ್ಯ ಕಲ್ಪಿಸುವ ಯೋಜನೆ ಆರಂಭಿಸುವ ಕುರಿತು ಚರ್ಚಿಸುವುದಾಗಿ ತಿಳಿಸಿದ್ದಾರೆ.