ಬೆಂಗಳೂರು : ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಮೈಸೂರಿಗೆ ಆಗಮಿಸುವ ಪ್ರವಾಸಿಗರು ಮತ್ತು ರಜಾದಿನಗಳನ್ನು ಪಡೆಯುವ ಇತರ ಪ್ರಯಾಣಿಕರ ಅನುಕೂಲಕ್ಕಾಗಿ 2,000 ಕ್ಕೂ ಹೆಚ್ಚು ವಿಶೇಷ ಬಸ್ ಸೇವೆಗಳನ್ನು ವ್ಯವಸ್ಥೆ ಮಾಡಿದೆ.
ಅಕ್ಟೋಬರ್ 9 ರಿಂದ 14 ರವರೆಗೆ ಕರ್ನಾಟಕ ಮತ್ತು ಇತರ ರಾಜ್ಯಗಳ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ವಿಶೇಷ ಬಸ್ ಸೇವೆಗಳು ಕಾರ್ಯನಿರ್ವಹಿಸಲಿವೆ. ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ ಮತ್ತು ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದಿಂದ ಬಸ್ಸುಗಳು ಹೊರಡಲಿವೆ. ಈ ಸೇವೆಗಳು ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಕಾರವಾರ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು ಮುಂತಾದ ಸ್ಥಳಗಳಿಗೆ ಸಂಚರಿಸಲಿವೆ.
ಇದಲ್ಲದೆ, ಹೈದರಾಬಾದ್, ಚೆನ್ನೈ, ಊಟಿ, ಕೊಡೈಕೆನಾಲ್, ಸೇಲಂ, ತಿರುಚಿರಾಪಳ್ಳಿ, ಪುದುಕೊಟ್ಟೈ, ಮಧುರೈ, ಪಣಜಿ, ಶಿರಡಿ, ಪುಣೆ, ಎರ್ನಾಕುಲಂ, ಪಾಲಕ್ಕಾಡ್ ಮತ್ತು ಇತರ ಹತ್ತಿರದ ರಾಜ್ಯಗಳಿಗೆ ವಿಶೇಷ ಸೇವೆಗಳು ಲಭ್ಯವಿರುತ್ತವೆ.
ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರಿಗೆ 260 ಹೆಚ್ಚುವರಿ ಬಸ್ಸುಗಳನ್ನು ನಿಯೋಜಿಸಲಾಗುವುದು ಮತ್ತು ಮೈಸೂರಿನ ಸುತ್ತಮುತ್ತಲಿನ ವಿವಿಧ ಪ್ರವಾಸಿ ಮತ್ತು ಧಾರ್ಮಿಕ ಸ್ಥಳಗಳಾದ ಚಾಮುಂಡಿ ಬೆಟ್ಟ, ಕೆಆರ್ಎಸ್ ಅಣೆಕಟ್ಟು / ಬೃಂದಾವನ ಉದ್ಯಾನ, ಶ್ರೀರಂಗಪಟ್ಟಣ, ನಂಜನಗೂಡು, ಮಡಿಕೇರಿ, ಮಂಡ್ಯ, ಮಳವಳ್ಳಿ, ಎಚ್.ಡಿ.ಕೋಟೆ, ಚಾಮರಾಜನಗರ, ಹುಣಸೂರು, ಕೆ.ಆರ್.ನಗರ ಮತ್ತು ಗುಂಡ್ಲುಪೇಟೆಗೆ ಒಟ್ಟು 600 ವಿಶೇಷ ಬಸ್ಗಳನ್ನು ಓಡಿಸಲಾಗುವುದು.ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ನೇರ ‘ಫ್ಲೈ ಬಸ್’ ಸೇವೆಯೂ ಲಭ್ಯವಿರುತ್ತದೆ.
ಅಕ್ಟೋಬರ್ 3 ರಿಂದ 15 ರವರೆಗೆ ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರಿಗಾಗಿ ಕೆಎಸ್ಆರ್ಟಿಸಿ ವಿಶೇಷ ಒಂದು ದಿನದ ಪ್ರವಾಸ ಪ್ಯಾಕೇಜ್ಗಳನ್ನು ಓಡಿಸಲಿದೆ. ಗಿರಿದರ್ಶಿನಿ ಪ್ಯಾಕೇಜ್ ಅಡಿಯಲ್ಲಿ ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು ಮತ್ತು ಚಾಮುಂಡಿ ಬೆಟ್ಟಕ್ಕೆ (ವಯಸ್ಕರಿಗೆ 400 ರೂ., ಮಕ್ಕಳಿಗೆ 250 ರೂ.) ಸಾರಿಗೆ ಸೌಲಭ್ಯ ಕಲ್ಪಿಸಲಾಗುವುದು. ಜಲದರ್ಶಿನಿ ಪ್ಯಾಕೇಜ್ ಗೋಲ್ಡನ್ ಟೆಂಪಲ್ (ಬೈಲಕುಪ್ಪೆ), ದುಬಾರೆ ಅರಣ್ಯ, ನಿಸರ್ಗಧಾಮ, ರಾಜಾಸೀಟ್, ಹಾರಂಗಿ ಜಲಾಶಯ ಮತ್ತು ಕೆಆರ್ಎಸ್ ಅಣೆಕಟ್ಟು ಮುಂತಾದ ಸ್ಥಳಗಳನ್ನು ಒಳಗೊಂಡಿರುತ್ತದೆ ಈ ಪ್ಯಾಕೇಜ್ ಸೇವೆಗಳು ಬೆಳಿಗ್ಗೆ ಮೈಸೂರಿನಿಂದ ಹೊರಟು ಆಯಾ ಸ್ಥಳಗಳನ್ನು ಕ್ರಮಿಸಿ ಸಂಜೆ ವೇಳೆಗೆ ಮೈಸೂರಿಗೆ ಮರಳುತ್ತವೆ. ಆನ್ಲೈನ್ ಟಿಕೆಟ್ ಬುಕಿಂಗ್ ಕೆಎಸ್ಆರ್ಟಿಸಿ ಅಧಿಕೃತ ವೆಬ್ಸೈಟ್ ಮೂಲಕ ಲಭ್ಯವಿದೆ.