![](https://kannadadunia.com/wp-content/uploads/2024/01/dinesh-gundurao-1.jpg)
ಬೆಂಗಳೂರು : ಡಯಾಲಿಸಿಸ್ ಮಾಡಿಸಿಕೊಳ್ಳುವವರು ಇನ್ಮುಂದೆ ಸೋಂಕು ತಗಲುವ ಆತಂಕ ಪಡಬೇಕಿಲ್ಲ. ಡಯಾಲಿಸಿಸ್ ಯಂತ್ರಗಳು ಕೆಟ್ಟು ನಿಂತು ರೋಗಿಗಳು ದಿನವಿಡೀ ಡಯಾಲಿಸಿಸ್ ಗಾಗಿ ಪರದಾಡಬೇಕಿಲ್ಲ. ರಾಜ್ಯದ ಜನಸಾಮಾನ್ಯರಿಗೆ ಉಚಿತವಾಗಿ ಉತ್ತಮ ಡಯಾಲಿಸಿಸ್ ಸೇವೆ ಒದಗಿಸುವತ್ತ ನಾವು ತೆಗೆದುಕೊಂಡ ದಿಟ್ಟ ಹೆಜ್ಜೆ ನಾಳೆಯಿಂದ ಫಲ ನೀಡಲಿದೆ.
ಹೌದು, ಸೋಂಕು ರಹಿತ ಏಕ ಬಳಕೆಯ ಹೊಸ ಡಯಾಲೈಸರ್ ಸೇವೆಗೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ. ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಇಂದು ಸಂಜೆ 5 ಗಂಟೆಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೂತನ ಡಯಾಲಿಸಿಸ್ ಸೇವೆಗೆ ಚಾಲನೆ ನೀಡಲಿದ್ದಾರೆ.
ಈ ಕುರಿತು ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದು, ರಾಜ್ಯದಾದ್ಯಂತ ಡಯಾಲಿಸಿಸ್ ಕೇಂದ್ರಗಳನ್ನ 219ಕ್ಕೆ ಹೆಚ್ಚಿಸಿದ್ದಲ್ಲದೇ, 800 ಹೊಸ ಏಕ ಬಳಕೆಯ ಡಯಾಲೈಸರ್ ಯಂತ್ರಗಳನ್ನ ಅಳವಡಿಸಲಾಗುತ್ತಿದೆ. ಇದರಿಂದ ವಾರ್ಷಿಕ ಸುಮಾರು 7.20 ಲಕ್ಷ ಡಯಾಲಿಸಿಸ್ ಸೇವೆಗಳನ್ನ ಒದಗಿಸುವ ಸಾಮರ್ಥ್ಯ ಕಲ್ಪಿಸಿದ್ದೇವೆ. ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆಯೊಂದರಲ್ಲೇ 20 ಹೊಸ ಡಯಾಲೈಸರ್ ಯಂತ್ರಗಳನ್ನ ಹಾಕಲಾಗಿದ್ದು, ಪ್ರತಿನಿತ್ಯ 72 ಜನರು ಡಯಾಲಿಸಿಸ್ ಮಾಡಿಸಿಕೊಳ್ಳಬಹುದು. ಸಾರ್ವಜನಿಕರು ಇದರ ಸದುಪಯೋಗ ಪಡೆಯುಂತಾಗಲಿ ಎಂದು ಆಶಿಸುತ್ತೇನೆ.