ನವದೆಹಲಿ: ಸರ್ಕಾರಿ ನೌಕರರಿಗೆ ಶೇಕಡಾ 4 ರಷ್ಟು ತುಟ್ಟಿಭತ್ಯೆ (ಡಿಎ) ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡುವ ಸಾಧ್ಯತೆಯಿದೆ ಎಂದು ವರದಿಗಳು ಬುಧವಾರ ತಿಳಿಸಿವೆ.
ಕೇಂದ್ರ ಸಚಿವ ಸಂಪುಟವು ಅನುಮತಿ ನೀಡಿದ ನಂತರ ಡಿಎ ಹೆಚ್ಚಳ ಪ್ರಕಟಣೆ ಇಂದು ನಡೆಯುವ ನಿರೀಕ್ಷೆಯಿದೆ. ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಿದರೆ, ಪ್ರಸ್ತುತ ತುಟ್ಟಿಭತ್ಯೆ ಶೇಕಡಾ 46 ರಷ್ಟಿರುತ್ತದೆ.
ಕೇಂದ್ರ ಸಚಿವ ಸಂಪುಟವು ಹಸಿರು ನಿಶಾನೆ ತೋರಿದರೆ, ಕೇಂದ್ರ ಸರ್ಕಾರಿ ನೌಕರರ ಡಿಎ ಹೆಚ್ಚಳವು ಜುಲೈ 1, 2023 ರಿಂದ ಜಾರಿಗೆ ಬರಲಿದೆ.
ದಸರಾ ಮತ್ತು ದೀಪಾವಳಿ ಹಬ್ಬಗಳಿಗೆ ಮುಂಚಿತವಾಗಿ ಕೇಂದ್ರ ಸರ್ಕಾರ ಡಿಎ ಹೆಚ್ಚಳವನ್ನು ಘೋಷಿಸುವ ನಿರೀಕ್ಷೆಯಿದೆ. ಅಕ್ಟೋಬರ್ ನಲ್ಲಿ ತುಟ್ಟಿಭತ್ಯೆ ಹೆಚ್ಚಳವನ್ನು ಅಧಿಕೃತವಾಗಿ ಮಾಡಿದರೆ, ಕೇಂದ್ರ ಸರ್ಕಾರಿ ನೌಕರರು ನವೆಂಬರ್ ತಿಂಗಳ ತಮ್ಮ ಹೆಚ್ಚಿದ ವೇತನವನ್ನು ಬಾಕಿಯೊಂದಿಗೆ ಪಡೆಯುತ್ತಾರೆ.
ಪ್ರಸ್ತುತ, 1 ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಶೇಕಡಾ 42 ರಷ್ಟು ತುಟ್ಟಿಭತ್ಯೆ ಪಡೆಯುತ್ತಿದ್ದಾರೆ. ಡಿಎಯನ್ನು ಕೊನೆಯದಾಗಿ ಮಾರ್ಚ್ 24, 2023 ರಂದು ಪರಿಷ್ಕರಿಸಲಾಯಿತು.ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಾಗಿರುವುದರಿಂದ ಡಿಎ ಹೆಚ್ಚಳವು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಭಾರಿ ಪರಿಹಾರವಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ, ಗೋಧಿ, ಅಕ್ಕಿ ಮತ್ತು ಬೇಳೆಕಾಳುಗಳ ಬೆಲೆಗಳು ಹೆಚ್ಚಾಗಿದೆ.