ಸಾಗರ : ಭೂತಾನ್ ಸೇರಿದಂತೆ ವಿದೇಶಗಳಿಂದ ದೇಶಕ್ಕೆ ಆಮದು ಮಾಡಿಕೊಳ್ಳುವ ಅಡಿಕೆಗೆ ಸುಂಕ ಹೆಚ್ಚಿಸಿ, ದೇಸಿ ಅಡಿಕೆಗೆ ಸ್ಥಿರ ಮಾರುಕಟ್ಟೆ ಒದಗಿಸಿ ರಾಜ್ಯದ ಅಡಿಕೆ ಬೆಳೆಗಾರರ ನೆರವಿಗೆ ಧಾವಿಸುವಂತೆ ಸಚಿವ ಮಧುಬಂಗಾರಪ್ಪ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಸಾಗರದ ಅಡಿಕೆ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘವು ಸ್ಥಳೀಯ ಈಡಿಗರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ರೈತರಿಗೆ ಸಹಕಾರ ಸಂಸ್ಥೆಗಳು ಜೀವನಾಡಿಯಾಗಿವೆ. ಈ ಸಂಸ್ಥೆಗಳು ಉತ್ತುಂಗಕ್ಕೆ ಏರುವಲ್ಲಿ ಮಾಜಿ ಮುಖ್ಯಮಂತ್ರಿಗಳಾಗಿದ್ದ ಎಸ್.ಬಂಗಾರಪ್ಪ ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಶ್ರಮ ಪ್ರಶಂಸನೀಯ ಎಂದ ಅವರು, ಅನೇಕ ಸಮಸ್ಯೆಗಳ ನಡುವೆಯೂ ಅಡಿಕೆ ವಹಿವಾಟು ಎಂದಿನಂತೆ ಸಾಗಿದೆ ಎಂದರು.
ಶರಾವತಿ ಮುಳುಗಡೆ ಸಂತ್ರಸ್ಥರು, ಬಗರ್‍ಹುಕುಂ ಸಾಗುವಳಿದಾರರ ಸಮಸ್ಯೆ ಸೇರಿದಂತೆ ರೈತರ ಎಲ್ಲಾ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಗೊಳಿಸಲು ಮಾನ್ಯಮುಖ್ಯಮಂತ್ರಿಗಳು ಉತ್ಸುಕರಾಗಿದ್ದಾರೆ. ರೈತರ ಕೈತಪ್ಪಿ ಹೋಗಿರುವ ಹಕ್ಕುಪತ್ರಗಳನ್ನು ಇಲಾಖೆ ವತಿಯಿಂದ ಪುನರ್ ಕೊಡಿಸಲು ಕ್ರಮ ವಹಿಸಲಾಗುವುದು ಎಂದ ಅವರು, ಎಲೆಚುಕ್ಕೆ ರೋಗದ ನಿಯಂತ್ರಣಕ್ಕೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಈಗಾಗಲೆ ಸಮಾಲೋಚನೆ ಮಾಡಲಾಗಿದೆ ಎಂದರು.