ಬೆಂಗಳೂರು: ಬಗರ್ ಹುಕುಂ ಸಾಗುವಳಿದಾರರು ಮತ್ತು ಶರಾವತಿ ಸಂತ್ರಸ್ತರ ಸಮಸ್ಯೆ ಸೇರಿದಂತೆ ಭೂಮಿ ಸಂಬಂಧಿತ ಧೀರ್ಘ ಕಾಲೀನ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅಧಿವೇಶನ ಅವಧಿಯಲ್ಲಿಯೇ ಉನ್ನತ ಮಟ್ಟದ ಸಭೆಯನ್ನು ನಡೆಸಲು ದಿನಾಂಕ ನಿಗದಿಪಡಿಸಲು ಕೋರಲಾಗಿದೆ.
ಅರಣ್ಯ, ಕಾನೂನು, ಕಂದಾಯ ಸಚಿವರು, ಮೂರು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಅಪರ ಕಾರ್ಯದರ್ಶಿಗಳು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರನ್ನು ಒಳಗೊಂಡಂತೆ ಸಭೆ ನಡೆಸಲು ಸಮಯ ನಿಗದಿ ಮಾಡಲು ಸಂಬಂಧಿತ ಪತ್ರ ವ್ಯವಹಾರವನ್ನು ಸಚಿವ ಮಧುಬಂಗಾರಪ್ಪ ಮಾಡಿದ್ದಾರೆ. ಈ ಸಂಬಂಧ ಸಂಬಂಧಿತ ಸಚಿವರು ಮತ್ತು ಅಧಿಕಾರಿಗಳಿಗೆ ಸಭೆಯ ಬಗ್ಗೆ ಗಮನ ಸೆಳೆಯಲಾಗಿದೆ.
ಸಭೆಯಲ್ಲಿ ಶರಾವತಿ ಸಂತ್ರಸ್ತರು ಭೂಮಿ ಡಿನೋಟಿಫಿಕೇಷನ್ ರದ್ದು, ಕೇಂದ್ರ ಸರ್ಕಾರದ ಪೂರ್ವಾನುಮತಿ ಪಡೆಯುವ ವಿಚಾರ. ಪಾರಂಪರಿಕ ಅರಣ್ಯ ಹಕ್ಕು ಕಾಯಿದೆಯಲ್ಲಿ ಅನುಷ್ಠಾನದಲ್ಲಿನ ಪ್ರಗತಿ, 27:04:1978 ಕ್ಕೆ ಪೂರ್ವದ ಸಾಗುವಳಿಗೆ ಹಕ್ಕು ಪತ್ರ ನೀಡುವ ವಿಚಾರ, ಅರಣ್ಯ ಭೂಮಿ ಇಂಡೀಕರಣ, ಕರ್ನಾಟಕ ಅರಣ್ಯ ಕಾಯಿದೆ 1963 ಸೆಕ್ಷನ್ 4(1) ರೀತಿಯ ಮೀಸಲು ಅರಣ್ಯ ಘೋಷಣೆ ಕುರಿತಾದ ಅಂತಿಮ ಅಧಿಸೂಚನೆ, ಬಗರ್ ಹುಕುಂ ರೈತರಿಗೆ ಸಾಗುವಳಿ ಪತ್ರ ವಿತರಣೆ ಪ್ರಕ್ರಿಯೆ, ಪರಿಭಾವಿತ ಅರಣ್ಯ ಅಧಿಸೂಚನೆ ಬಗ್ಗೆ ಚರ್ಚಿಸಲಾಗುವುದು.
ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ವಿಶೇಷ ಹಕ್ಕುಳ್ಳ ಸೊಪ್ಪಿನಬೆಟ್ಟ, ಕಾನು, ಕುಮ್ಕಿ, ಕೊಡಗಿನ ಜಮ್ಮಾ, ಬಾಣೆ, ಮೋಟಸಾಲು, ತರಿ ಜಮೀನುಗಳ ಸಾಗುವಳಿದಾರರಿಗೆ ಸಕ್ರಮ ಮಾಡುವ ವಿಚಾರ ಕುರಿತು ಚರ್ಚೆಗಳನ್ನು ಸಭೆಯಲ್ಲಿ ಮಾಡಲಾಗುವುದು.
ಮೈಸೂರು ಲ್ಯಾಂಡ್ ರೆವಿನ್ಯೂ ಕೋಡ್ 1888 ಸೆಕ್ಷನ್ ಅನ್ವಯ 1964 ಭೂ ಕಂದಾಯ ಕಾಯಿದೆ ಜಾರಿಗೆ ಬರುವ ಪೂರ್ವದಲ್ಲಿ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಂಜೂರು ಮಾಡಲಾದ ಮನೆಗಳ ಹಕ್ಕುಪತ್ರ ಖಾಯಂಗೊಳಿಸುವ ವಿಚಾರವಾಗಿ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಅಧಿವೇಶನ ನಡೆವಾಗಲೇ ಸಭೆ ನಡೆಸಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಚಿವರುಗಳ ಸಭೆ ನಡೆಸಲು ತೀರ್ಮಾನಿಸಲಾಗಿದೆ.