ಬೆಂಗಳೂರು : ಅನಧಿಕೃತ ಸಾಗುವಳಿಗಳನ್ನು ಸಕ್ರಮಗೊಳಿಸುವಂತೆ ಕೋರಿ ಸಲ್ಲಿಸಿರುವ 9.90 ಲಕ್ಷ ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. 15 ವರ್ಷಗಳಿಂದ ಸಾಗುವಳಿ ಮಾಡಿರುವುದನ್ನು ಖಾತರಿಪಡಿಸಿಕೊಂಡ ಬಳಿಕವೇ ಮಂಜೂರಾತಿ ಆದೇಶ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಸಾವಿರಾರು ಎಕರೆ ಸರ್ಕಾರಿ ಭೂಮಿ ಅಕ್ರಮ ಸಾಗುವಳಿದಾರರ ಪಾಲಾಗಿದ್ದು, ಅಧಿಕಾರಿಗಳು ಬಗರ್ ಹುಕುಂ ತಂತ್ರಾಂಶದ ಮೂಲಕ ಕೃಷಿ ಚಟುವಟಿಕೆ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು. ಅಕ್ರಮ ಸಾಗುವಳಿ ಭೂಮಿಯಲ್ಲಿ ಕೃಷಿ ಅಥವಾ ಬೇರೆ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಸ್ಯಾಟಲೈಟ್ ಇಮೇಜ್ ಮೂಲಕ ಮಾಹಿತಿ ಪಡೆದು ಅರ್ಜಿ ವಿಲೇವಾರಿ ಮಾಡಬೇಕು ಎಂದು ತಿಳಿಸಿದ್ದಾರೆ.
ಬಗರ್ ಹುಕುಂ ಅರ್ಜಿಗಳ ಪೈಕಿ ಅರ್ಹ ರೈತರಿಗೆ ಮುಂದಿನ ಆರು ತಿಂಗಳ ಒಳಗೆ ಸಾಗುವಳಿ ಚೀಟಿ ಕೊಡಬೇಕು. ಕೃಷಿ ಜಮೀನುಗಳಿಗೆ ತೆರಳಲು ರಸ್ತೆ ವ್ಯವಸ್ಥೆ ಮಾಡಬೇಕು ಎಂದು ಹೇಳಿದ್ದಾರೆ.