ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ವತಿಯಿಂದ ಪ್ರಸ್ತಕ ಸಾಲಿಗೆ ವಿವಿಧ ಯೋಜನೆಗಳಡಿ ಸಾಲ-ಸೌಲಭ್ಯ ನೀಡಲು ಉದ್ದೇಶಿಸಲಾಗಿದ್ದು, ಅರ್ಹರಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನವಾಗಿದ್ದು, ಅಸಕ್ತರು ಆನ್‍ಲೈನ್ ವೆಬ್‍ಸೈಟ್ ವಿಳಾಸ www.kacdc.karnataka.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
*ಅರ್ಹತೆ
ಸಾಮಾನ್ಯ ವರ್ಗದಲ್ಲಿ ಆರ್ಯ ವೈಶ್ಯ ಸಮುದಾಯಕ್ಕೆ ಸೇರಿರಬೇಕು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ “ನಮೂನೆ-ಜಿ” ಯಲ್ಲಿ ಪಡೆದಿರಬೇಕು (ಪ್ರಮಾಣ ಪತ್ರವು ಚಾಲ್ತಿಯಲ್ಲಿರಬೇಕು). ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆಗೆ ತಮ್ಮ ಮೊಬೈಲ್ ಸಂಖ್ಯೆ ಜೋಡಣೆ ಮಾಡಿರಬೇಕು ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಸೀಡ್ ಮಾಡಿಸಿರಬೇಕು.
ಆಯ್ಕೆ ಮಾಡುವಾಗ ಮಹಿಳೆಯರಿಗೆ ಶೇ.33, ವಿಶೇಷಚೇತನರಿಗೆ ಶೇ.5 ಹಾಗೂ ತೃತೀಯ ಲಿಂಗಿಗಳಿಗೆ ಶೇ.5 ಮೀಸಲಾತಿ ಇರಿಸಿದೆ. ಒಂದು ಕುಟುಂಬದಲ್ಲಿ ಒಬ್ಬರು ಮಾತ್ರ ಸಾಲ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ (ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಮಾತ್ರ ಇಬ್ಬರಿಗೆ ಅವಕಾಶವಿರುತ್ತದೆ)
ಯೋಜನೆಗಳು
ಸ್ವಯಂ-ಉದ್ಯೋಗ ನೇರ ಸಾಲ ಯೋಜನೆ
ಅರ್ಜಿದಾರರು 18 ವರ್ಷ ಮೇಲ್ಪಟ್ಟು 55 ವರ್ಷದ ಒಳಗಿನವರಾಗಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ರೂ.3 ಲಕ್ಷ ಮಿತಿಯೊಳಗಿರಬೇಕು. ಈ ಯೋಜನೆಯಲ್ಲಿ ರೂ.1 ಲಕ್ಷಗಳ ಸಾಲ ಒದಗಿಸಲಾಗುವುದು. ಈ ಮೊತ್ತದಲ್ಲಿ ಶೇ.20 ರಷ್ಟು ಸಹಾಯಧನ ಹಾಗೂ ಶೇ.80ರಷ್ಟು ಸಾಲವನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಮಂಜೂರು ಮಾಡಲಾಗುವುದು.
2 ತಿಂಗಳ ವಿರಾಮ ಅವಧಿ ಇರುತ್ತದೆ. ನಂತರ ಸಾಲವನ್ನು 34 ಮಾಸಿಕ ಕಂತುಗಳಲ್ಲಿ ಮರುಪಾವತಿಸಬೇಕು. 2019-20 ಮತ್ತು 2020-21ನೇ ಸಾಲಿನ ಫಲಾನುಭವಿಗಳು ಪಡೆದ ಸಾಲವನ್ನು ಅವಧಿಯೊಳಗೆ ಸಂಪೂರ್ಣವಾಗಿ ಮರುಪಾವತಿಸಿದ್ದಲ್ಲಿ, ಪುನಃ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
*ಆರ್ಯ ವೈಶ್ಯ ಆಹಾರ ವಾಹಿನಿ
ಅರ್ಜಿದಾರರು 21 ವರ್ಷ ಮೇಲ್ಪಟ್ಟು 55 ವರ್ಷದ ಒಳಗಿನವರಾಗಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆ ರೂ.6 ಲಕ್ಷ ಮಿತಿಯೊಳಗಿರಬೇಕು. ಅಭ್ಯರ್ಥಿಯು ಹಳದಿ ಬೋರ್ಡ್ (ಎಲೆಕ್ಟ್ರಿಕ್, ಸಿಎನ್‍ಜಿ) ತ್ರಿಚಕ್ರ ವಾಹನ ಅಥವಾ ನಾಲ್ಕು ಚಕ್ರದ ವಾಹನ ಖರೀದಿಸಲು ನಿಗಮದಿಂದ ರೂ.1 ಲಕ್ಷದವರೆಗೆ ಸಬ್ಸಿಡಿ ನೀಡಲಾಗುವುದು. ಬಾಕಿ ಮೊತ್ತವನ್ನು ಯಾವುದಾದರು ಬ್ಯಾಂಕ್‍ಗಳಿಂದ ಸಾಲ ಪಡೆಯಬೇಕು.
ವಾಹನವನ್ನು ಆಹಾರ ವಾಹಿನಿಯನ್ನಾಗಿ ಪರಿವರ್ತಿಸಿದ್ದಲ್ಲಿ ಮಾತ್ರ ಎರಡನೇ ಕಂತಿನ ಮೊತ್ತ ರೂ.1 ಲಕ್ಷ ಸಬ್ಸಿಡಿಯನ್ನು ನೇರವಾಗಿ ಫಲಾನುಭವಿಗೆ ಡಿ.ಬಿ.ಟಿ ಮೂಲಕ ಬಿಡುಗಡೆ ಮಾಡಲಾಗುವುದು.
ವಾಸವಿ ಜಲಶಕ್ತಿ ಯೋಜನೆ
ಈ ಯೋಜನೆಯಡಿ 2 ರಿಂದ 15 ಎಕರೆ ಕೃಷಿ ಭೂಮಿ ಹೊಂದಿರುವವರಿಗೆ ನೀರಾವರಿ ಸೌಲಭ್ಯ ಒದಗಿಸಲು ಸಾಲ-ಸಹಾಯಧನ ನೀಡಲಾಗುವುದು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆ ರೂ.6 ಲಕ್ಷ ಮಿತಿಯೊಳಗಿರಬೇಕು.
ಅರ್ಜಿದಾರರು 21 ವರ್ಷ ಮೇಲ್ಪಟ್ಟು 55 ವರ್ಷದ ಒಳಗಿನವರಾಗಿರಬೇಕು. ಈ ಯೋಜನೆಯಡಿ ಗರಿಷ್ಠ ರೂ.2 ಲಕ್ಷ ಸಾಲವನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಒದಗಿಸಲಾಗುವುದು ಹಾಗೂ ವಿದ್ಯುದೀಕರಣಕ್ಕಾಗಿ ರೂ.50 ಸಾವಿರ ಸಹಾಯಧನ ನೀಡಲಾಗುವುದು. 6 ತಿಂಗಳ ವಿರಾಮಾವಧಿ ಇರುತ್ತದೆ. ನಂತರ ಸಾಲವನ್ನು 34 ಮಾಸಿಕ ಕಂತುಗಳಲ್ಲಿ ಮರುಪಾವತಿಸಬೇಕು.
*ಅರಿವು ಶೈಕ್ಷಣಿಕ ಸಾಲ ಯೋಜನೆ
ಅರ್ಜಿದಾರರು 18 ವರ್ಷ ಮೇಲ್ಪಟ್ಟು 35 ವರ್ಷದ ಒಳಗಿನವರಾಗಿರಬೇಕು. ಈ ಯೋಜನೆಯಲ್ಲಿ ಸಿಇಟಿ, ಎನ್‍ಇಇಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವೃತ್ತಿಪರ ಕೋರ್ಸ್ ಹಾಗೂ ಪಿಹೆಚ್‍ಡಿಯಲ್ಲಿ ವ್ಯಾಸಂಗ ಮಾಡುವ ಆರ್ಯ ವೈಶ್ಯ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ.1 ಲಕ್ಷ ಸಾಲವನ್ನು ಶೇ.2ರ ಬಡ್ಡಿದರದಲ್ಲಿ ಶೈಕ್ಷಣಿಕ ಸಾಲ ನೀಡಲಾಗುವುದು.
ವ್ಯಾಸಂಗ ಪೂರ್ಣಗೊಂಡ ನಂತರ 04 ತಿಂಗಳ ವಿರಾಮಾವಧಿ ಇರುತ್ತದೆ. ನಂತರ ಸಾಲವನ್ನು 36 ಮಾಸಿಕ ಕಂತುಗಳಲ್ಲಿ ಮರುಪಾವತಿಸಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆ ರೂ.6 ಲಕ್ಷ ಮಿತಿಯೊಳಗಿರಬೇಕು (ಈ ಯೋಜನೆಗೆ ಸಂಬಂಧಪಟ್ಟಂತೆ ಸಿಇಟಿ ಮತ್ತು ನೀಟ್ ಕೌನ್ಸ್‍ಲಿಂಗ್ ಮುಗಿದ ನಂತರ ಅರ್ಜಿಗಳನ್ನು ಸ್ವೀಕರಿಸಲಾಗುವುದು).
ವಿವರಗಳಿಗಾಗಿ www.kacdc.karnataka.gov.in ಗೆ ಭೇಟಿ ನೀಡಬಹುದು.ಹೆಚ್ಚಿನ ಮಾಹಿತಿಗಾಗಿ ನಗರದ ಕುಮಾರಸ್ವಾಮಿ ದೇವಸ್ಥಾನ ಎದುರಿನ ಕ್ಲಬ್ ರಸ್ತೆಯ ವೀರನಗೌಡ ಕಾಲೋನಿಯ ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮ ಕಚೇರಿ ಅಥವಾ ಸಹಾಯವಾಣಿ ಸಂ.08392-267038 ಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಭೀಮಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.