ಬೆಂಗಳೂರು : ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಡಿಸೆಂಬರ್ ವರೆಗೂ 5 ಕೆಜಿ ಅಕ್ಕಿ ಹಣ ಖಾತೆಗೆ ಜಮಾ ಮಾಡಲು ಮುಂದಾಗಿದೆ.
ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಹೆಚ್ಚುವರಿ ಅಕ್ಕಿ ನೀಡಲು ಪ್ರಯತ್ನ ಮುಂದುವರಿದಿದೆ. ಆದರೆ, ಪಂಚ ರಾಜ್ಯ ಚುನಾವಣೆ ನೀತಿ ಸಂಹಿತೆ ಕಾರಣ ಅಕ್ಕಿ ಲಭ್ಯವಾಗುತ್ತಿಲ್ಲ. ಇದರೊಂದಿಗೆ ಅಕ್ಕಿ ದೊರೆತರೂ ಸಾಗಣೆ ವೆಚ್ಚ ಹೆಚ್ಚುವರಿ ಹೊರೆಯಾಗಲಿದೆ.ಆಹಾರ ಇಲಾಖೆ ಆರಂಭದಿಂದಲೂ 5 ಕೆಜಿ ಹೆಚ್ಚುವರಿ ಅಕ್ಕಿಯ ಬದಲಿಗೆ ಫಲಾನುಭವಿಗಳ ಖಾತೆಗೆ ಹಣ ಸಂದಾಯ ಮಾಡುತ್ತಿದೆ.
ಡಿಸೆಂಬರ್ ವರೆಗೂ ಅಕ್ಕಿ ಬದಲಿಗೆ ಹಣ ಪಾವತಿ ಮುಂದುವರೆಯಲಿದೆ ಎಂದು ಹೇಳಲಾಗಿದೆ. ಪ್ರಸ್ತುತ ರಾಜ್ಯದಲ್ಲಿ 1.08 ಬಿಪಿಎಲ್, ಅಂತ್ಯೋದಯ 3.69 ಕೋಟಿ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯಡಿ ಮಾಸಿಕ ಸರಾಸರಿ 605 ಕೋಟಿ ರೂ. ಪಾವತಿಸಲಾಗುತ್ತಿದೆ. ಜುಲೈ ಮತ್ತು ಆಗಸ್ಟ್ ಅಂತ್ಯದೊಳಗೆ ನಗದು ಪಾವತಿಸಿದ ಸರ್ಕಾರ ನಂತರ ವಿಳಂಬವಾಗಿ ಪಾವತಿಸುತ್ತಿದೆ. ಸೆಪ್ಟಂಬರ್ ತಿಂಗಳವರೆಗೆ ಮಂಜೂರಾಗಿದ್ದ ಹಣ ಫಲಾನುಭವಿಗಳ ಖಾತೆಗೆ ಪಾವತಿಯಾಗಿದೆ. ಅಕ್ಟೋಬರ್ ತಿಂಗಳ ಹಣವನ್ನು ನವಂಬರ್ ನಲ್ಲಿ ಜಮಾ ಮಾಡಲಾಗುವುದು ಎಂದು ಹೇಳಲಾಗಿದೆ.