
ಚಿತ್ರದುರ್ಗ : ಸರ್ಕಾರದ ಪ್ರಮುಖ ಯೋಜನೆಯಾಗಿರುವ ಅನ್ನಭಾಗ್ಯ ಯೋಜನೆಯಡಿ ಪ್ರಸ್ತುತ ಪ್ರತಿ ಫಲಾನುಭವಿಗೆ 05 ಕೆ.ಜಿ. ಅಕ್ಕಿ ಹಾಗೂ ಉಳಿದಂತೆ 05 ಕೆ.ಜಿ. ಅಕ್ಕಿಯ ಬದಲಿಗೆ ಅಕ್ಕಿಯ ಮೊತ್ತಕ್ಕೆ ಹಣ ಪಾವತಿಸಲಾಗುತ್ತಿದ್ದು, ಶೀಘ್ರವೇ ಹಣದ ಬದಲಿಗೆ ಪೂರ್ಣ ಪ್ರಮಾಣದಲ್ಲಿ ಅಕ್ಕಿಯನ್ನೇ ನೀಡಲಾಗುವುದು ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಅವರು ಹೇಳಿದರು.
ಹಿರಿಯೂರು ತಾಲ್ಲೂಕಿನ ಧರ್ಮಪುರದ ವಾಸವಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಿರಿಯೂರು ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಧರ್ಮಪುರ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಡವರಿಗೆ ಅನ್ನವನ್ನು ನೀಡುವ ಅನ್ನಭಾಗ್ಯ ಯೋಜನೆಯಡಿ ಪ್ರಸ್ತುತ ಪ್ರತಿ ಫಲಾನುಭವಿಗೆ ಪ್ರತಿ ತಿಂಗಳು 05 ಕೆ.ಜಿ. ಅಕ್ಕಿಯನ್ನು ನೀಡಿ, ಉಳಿದ 05 ಕೆ.ಜಿ. ಅಕ್ಕಿಯ ಮೊತ್ತ ರೂ. 170 ಗಳನ್ನು ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ. ಶೀಘ್ರವೇ ಒಂದೆರಡು ತಿಂಗಳಿನಲ್ಲಿ ಫಲಾನುಭವಿಗೆ ಹಣದ ಬದಲಿಗೆ ಪೂರ್ಣ ಪ್ರಮಾಣದಲ್ಲಿ ಅಕ್ಕಿಯನ್ನೇ ನೀಡಲಾಗುವುದು ಎಂದರು.
ಆಡಳಿತ ಚುರುಕುಗೊಳಿಸುವ ಜತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಮುಖ್ಯಮಂತ್ರಿಗಳ ನೆಚ್ಚಿನ ಜನತಾ ದರ್ಶನ ಕಾರ್ಯಕ್ರಮವು ಅತ್ಯುತ್ತಮ ಹಾಗೂ ಯಶಸ್ವಿಯತ್ತ ಸಾಗುತ್ತಿದೆ. ಜನತಾ ದರ್ಶನ ಕಾರ್ಯಕ್ರಮದಲ್ಲಿ ಜನರ ಅಹವಾಲು ಆಲಿಸಿ ಸಮಸ್ಯೆಗಳಿಗೆ ಪರಿಹಾರೋಪಾಯ ಒದಗಿಸಲಾಗುತ್ತಿದೆ. ಜನರ ಮನೆಬಾಗಿಲಿಗೆ ಸರ್ಕಾರದ ಯೋಜನೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದರು.