ಯಾದಗಿರಿ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಫ್ಯೂಚರ್ ಜನರಲ್ ಇನ್ಸೂರೆನ್ಸ್ ಕಂಪನಿಯು ಪ್ರತಿಯೊಬ್ಬ ದೂರುದಾರರಿಗೆ ಬಿಮಾ ಕಂತಿನ ಪ್ರಕಾರ 5000 ರೂ. ನೀಡುವಂತೆ ಯಾದಗಿರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ನೀಡಿದೆ.
ಆದೇಶ ಹೊರಡಿಸಿದ 45 ದಿನಗಳ ಒಳಗೆ ವಾರ್ಷಿಕ ಶೇಕಡ 6ರಷ್ಟು ಬಡ್ಡಿ, ಮಾನಸಿಕ ಹಿಂಸೆ ಮತ್ತು ಪ್ರಕರಣದ ಖರ್ಚು ವೆಚ್ಚ ಪಾವತಿಸುವಂತೆ ಆಯೋಗದ ಅಧ್ಯಕ್ಷ ಫರಿನಾ ಸೂಚಿಸಿದ್ದಾರೆ.
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬೆಂಡೆಬೆಂಬಳಿ ಗ್ರಾಮದ ರೈತ ವಿರೂಪಣ್ಣ ರೆಡ್ಡಿ ಮತ್ತು ಇತರ 90 ರೈತರು ಕರ್ನಾಟಕ ಗ್ರಾಮೀಣ ಬ್ಯಾಂಕ್ ಬಂಡೆಬೆಂಬಳಿ ಶಾಖೆಯಿಂದ 2018 -19 ನೇ ಸಾಲಿಗೆ ಮುಂಗಾರು ಬೆಳೆ ಸಾಲ ಪಡೆದಿದ್ದರು. ಬ್ಯಾಂಕಿನವರು ಸರ್ಕಾರದ ಕಡ್ಡಾಯ ಮಾರ್ಗಸೂಚಿ ಪ್ರಕಾರ ಬೆಳೆ ಸಾಲ ಪಡೆದ ಎಲ್ಲಾ ರೈತರಿಗೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ವಿಮಾ ಕಂತನ್ನು ಫ್ಯೂಚರ್ ಜನರಲ್ ಇನ್ಸೂರೆನ್ಸ್ ಕಂಪನಿಗೆ ರೈತರ ಪರ ಸಂದಾಯ ಮಾಡಿತ್ತು.
ನಂತರ ಪ್ರಕೃತಿ ವಿಕೋಪದಿಂದ ಬೆಳೆ ನಾಶವಾದ ಕಾರಣ ಬೆಳೆ ವಿಮೆ ಪರಿಹಾರ ಮೊತ್ತ ಪಾವತಿಸುವಂತೆ ಬ್ಯಾಂಕ್ ಹಾಗೂ ಇನ್ಸೂರೆನ್ಸ್ ಕಂಪನಿಗೆ ರೈತರು ಕೋರಿದ್ದರು. ಅಲ್ಲದೆ, ನೋಟಿಸ್ ನೀಡಿದ್ದರೂ ಕೂಡ ಸಮಂಜಸ ಉತ್ತರ ಮತ್ತು ಪರಿಹಾರವನ್ನು ನೀಡಿರಲಿಲ್ಲ.
ಹೀಗಾಗಿ 91 ರೈತರು ಒಂದೇ ದೂರಿನಡಿ ಯಾದಗಿರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮುಂದೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಇನ್ಸೂರೆನ್ಸ್ ಕಂಪನಿ ವಿರುದ್ಧ ಬೆಳೆ ವಿಮೆ ಪರಿಹಾರ ಮೊತ್ತ ನೀಡುವಲ್ಲಿ ಸೇವಾ ನ್ಯೂನ್ಯತೆಯಾಗಿರುವ ಬಗ್ಗೆ ಕೇಸು ದಾಖಲಿಸಿದ್ದರು. ವಿಚಾರಣೆ ನಡೆಸಿದ ಆಯೋಗ 91 ರೈತರಿಗೆ ತಲಾ 5 ಸಾವಿರ ರೂಪಾಯಿ ಪರಿಹಾರ ನೀಡಲು ಆದೇಶಿಸಿದೆ.