ಮಡಿಕೇರಿ: ಸರ್ಕಾರದ ನಿರ್ದೇಶನದಂತೆ ಜಿಲ್ಲೆಯ ಎಲ್ಲಾ ಸಹಕಾರ ಬ್ಯಾಂಕ್ ಗಳಲ್ಲಿ ಕೃಷಿಕರಿಗೆ ದಂತೆ ಶೂನ್ಯ ಬಡ್ಡಿ ದರದಲ್ಲಿ 3 ರಿಂದ 5 ಲಕ್ಷ ರೂ.ವರೆಗೂ ಸಾಲ ನೀಡಲು ಮುಂದಾಗಲಾಗಿದೆ ಎಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ.ಗಣಪತಿ ಅವರು ತಿಳಿಸಿದ್ದಾರೆ.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ “ಉನ್ನತಿ ಭವನ”ದ ದಿ:ಪಂದ್ಯಂಡ.ಐ.ಬೆಳ್ಯಪ್ಪ ಸ್ಮಾರಕ ಸಭಾಂಗಣದಲ್ಲಿ ಶನಿವಾರ ನಡೆದ ಬ್ಯಾಂಕಿನ 99 ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೃಷಿಕರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಆ ನಿಟ್ಟಿನಲ್ಲಿ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ರೂ.ವರೆಗೂ ಸಾಲವನ್ನು ಸಹಕಾರ ಬ್ಯಾಂಕುಗಳ ಮೂಲಕ ವಿತರಿಸಲಾಗುತ್ತಿದೆ ಎಂದು ಅವರು ಹೇಳಿದರು.
ಪ್ರಸಕ್ತ ಸಾಲಿನಲ್ಲಿ ಸರ್ಕಾರದ ಕೃಷಿ ಅಲ್ವಾವಧಿ ಸಾಲ 5 ಲಕ್ಷ ರೂ., ಮಧ್ಯಮಾವಧಿ ಬಡ್ಡಿ ರಿಯಾಯಿತಿ ಯೋಜನೆಯಡಿ ಗರಿಷ್ಠ ಮಿತಿ 15 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಕೊಡಗು ಜಿಲ್ಲೆಯ ಖಾಯಂ ನಿವಾಸಿಗಳ ಮಕ್ಕಳು ದೇಶ ಮತ್ತು ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಲು ಬ್ಯಾಂಕಿನಲ್ಲಿ “ವಿದ್ಯಾ ಸಹಕಾರ”ವೆಂಬ ವಿದ್ಯಾಭ್ಯಾಸ ಸಾಲದ ಯೋಜನೆಯನ್ನು ಗರಿಷ್ಠ 60 ಲಕ್ಷ ರೂ.ವರೆಗೆ ನೀಡಲಾಗುತ್ತಿದೆ ಎಂದರು.