ಬೆಂಗಳೂರು : ರಾಜ್ಯಾದ್ಯಂತ 7.5 ಲಕ್ಷ ಕೋಟಿ ಹೂಡಿಕೆಯಾಗಲಿದ್ದು, ಬರೋಬ್ಬರಿ 20 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ.
2025-30 ನೇ ಸಾಲಿನ ನೂತನ ಕೈಗಾರಿಕಾ ನೀತಿಯಡಿ ರಾಜ್ಯಾದ್ಯಂತ ₹7.5 ಲಕ್ಷ ಕೋಟಿ ಹೂಡಿಕೆಯನ್ನು ನಿರೀಕ್ಷೆ ಮಾಡಲಾಗಿದೆ. ಇದರಿಂದ 20 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಬೆಂಗಳೂರು ಮತ್ತು ಬೆಂಗಳೂರಿನಾಚೆಗೂ ಕೈಗಾರಿಕೆಗಳ ಸ್ಥಾಪನೆಗೆ ನೂತನ ನೀತಿ ಒತ್ತು ನೀಡಲಿದೆ. ಸುಸ್ಥಿರ ಅಭಿವೃದ್ಧಿಯ ಮಾದರಿಗಳನ್ನು ಅನುಸರಿಸಲಿದೆ. ಎಲ್ಲ ಕ್ಷೇತ್ರ ಮತ್ತು ವಲಯಗಳಲ್ಲೂ ಹೂಡಿಕೆಗೆ ಉತ್ತೇಜನ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಅರಮನೆ ಮೈದಾನದಲ್ಲಿ ಆಯೋಜಿಸಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರ ಜೊತೆಗೂಡಿ ಉದ್ಘಾಟಿಸಿದರು. ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್, 19 ದೇಶಗಳ 2,000ಕ್ಕೂ ಹೆಚ್ಚು ಹೂಡಿಕೆದಾರರು, ಉದ್ಯಮಿಗಳು, ರಾಜ್ಯ ಸರ್ಕಾರದ ಸಚಿವರುಗಳು, ಶಾಸಕರು ಹಾಗೂ ಅನೇಕ ಮಂದಿ ಗಣ್ಯರು ಉಪಸ್ಥಿತರಿದ್ದರು. ಉದ್ದಿಮೆ, ನೀತಿ ನಿರೂಪಣೆ ಹಾಗೂ ನಾವೀನ್ಯತೆ ಕ್ಷೇತ್ರದ ದಿಗ್ಗಜರ ಸಮಾಗಮಕ್ಕೆ, ಚಿಂತನ ಮಂಥನಕ್ಕೆಈ ಸಮಾವೇಶ ವೇದಿಕೆ ಒದಗಿಸಲಿದೆ.