ಉದ್ಯೋಗ ನಿರೀಕ್ಷೆಯಲ್ಲಿ ಇದ್ದವರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್)ದಲ್ಲಿ 1899 ಕಿರಿಯ ಪವರ್ ಮ್ಯಾನ್ ಹುದ್ದೆಗಳಿಗೆ ಪ್ರಕ್ರಿಯೆ ಆರಂಭವಾಗಿದೆ.
ಈ ನೇಮಕಾತಿಯ ಪ್ರಾರಂಭಿಕ ಹಂತವಾಗಿ 21 ಜನರಿಗೆ ನೇಮಕಾತಿ ಆದೇಶ ಪತ್ರವನ್ನು ವಿತರಿಸಲಾಗಿದೆ ಎಂದು ಇಂಧನ ಸಚಿವ ವಿ. ಸುನೀಲ್ ಕುಮಾರ್ ಮಾಹಿತಿ ನೀಡಿದ್ರು.
ಬೆಂಗಳೂರಿನ ಕಾವೇರಿ ಭವನಲ್ಲಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಸಭಾಂಗಣದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಕೆಪಿಟಿಸಿಎಲ್ ಹುದ್ದೆಗೆ 2019ರಲ್ಲೇ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಸಾಕಷ್ಟು ಮಂದಿ ನನ್ನ ಬಳಿ ಹೇಳಿದ್ದರು. ಹೀಗಾಗಿ ನಾನು ನೆನೆಗುದಿಗೆ ಬಿದ್ದಿದ್ದ ನೇಮಕಾತಿ ಪ್ರಕ್ರಿಯೆಗೆ ಚುರುಕು ಮುಟ್ಟಿಸಿದ್ದೇನೆ. ಇದರ ಫಲವಾಗಿ ಇಂದು 21 ಮಂದಿ ಕಿರಿಯ ಪವರ್ ಮ್ಯಾನ್ಗಳಿಗೆ ಸಾಂಕೇತಿಕವಾಗಿ ಆದೇಶ ಪ್ರತಿ ನೀಡಲಾಗಿದೆ. ಉಳಿದ 1878 ಮಂದಿ ಶೀಘ್ರದಲ್ಲೇ ಆದೇಶ ಪ್ರತಿ ನೀಡಲಾಗುತ್ತದೆ ಎಂದು ಸುನೀಲ್ ಕುಮಾರ್ ಹೇಳಿದ್ದಾರೆ