ಕೊರೊನಾ 2 ಅಲೆಗಳ ಬಳಿಕ ಇದೀಗ ಸೋಂಕು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ – ಕಾಲೇಜುಗಳು ಆರಂಭವಾಗುತ್ತಿವೆ. ಶೈಕ್ಷಣಿಕ ವರ್ಷ ತಡವಾಗಿ ಆರಂಭವಾಗಿದ್ದರೂ ಸಹ ಪಠ್ಯ ಕಡಿತ ಮಾಡುವ ಯಾವುದೇ ಇಂಗಿತವನ್ನು ಸರ್ಕಾರ ಹೊಂದಿಲ್ಲ. ಹೀಗಾಗಿ ಸಕಾಲಕ್ಕೆ ಪಠ್ಯವನ್ನು ಪೂರ್ಣಗೊಳಿಸುವ ಮಹತ್ತರ ಸವಾಲು ಎದುರಾಗಿದೆ.
ರಜೆ ಕಡಿತ ಮಾಡುವ ಮೂಲಕ ಪಠ್ಯವನ್ನು ಪೂರ್ಣಗೊಳಿಸುವ ವಿಶ್ವಾಸವನ್ನು ಸರ್ಕಾರ ಹೊಂದಿದೆ. ಇದರ ಮಧ್ಯೆ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್ ಅಶ್ವತ್ಥನಾರಾಯಣ ಮಹತ್ವದ ಹೇಳಿಕೆ ನೀಡಿದ್ದು, 17000 ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡು ಶೈಕ್ಷಣಿಕ ಚಟುವಟಿಕೆ ಮುಂದುವರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ರಾಜ್ಯದಾದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹೆಚ್ಚುವರಿಯಾಗಿ 8000 ಬೋಧಕರ ಅಗತ್ಯವಿದೆ ಎಂದು ಹೇಳಿದ್ದಾರೆ. ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿರುವ ಕಾಲೇಜುಗಳಿಗೆ ಒಟ್ಟು 6,500 ಬೋಧಕರ ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ ಆರು ಸಾವಿರ ಹುದ್ದೆಗಳು ಭರ್ತಿಯಾಗಿವೆ ಎಂದು ಹೇಳಿದ್ದಾರೆ.