
ಹಬ್ಬದ ದಿನ ವೃತ ಆಚರಿಸಿ, ಉಪವಾಸ ಇದ್ಕೊಂಡು ಪ್ರಯಾಣ ಮಾಡೋದು ಬಹಳ ಕಷ್ಟಕರವಾದ ಕೆಲಸ. ಅದರಲ್ಲೂ ವಿಶೇಷವಾಗಿ ನವರಾತ್ರಿಯ ಸಮಯದಲ್ಲಿ ಉಪವಾಸ ಮಾಡೋದು ಪ್ರಯಾಣ ಮಾಡುವವರಿಗೆ ಕಷ್ಟವಾಗುತ್ತದೆ.
ಇದನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ರೈಲ್ವೆ ಇಲಾಖೆಯ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ಹೊಸ ನವರಾತ್ರಿ ವಿಶೇಷ ಮೆನುವನ್ನು ಪರಿಚಯಿಸಿದೆ. ಇದು ಚೈತ್ರ ನವರಾತ್ರಿ ಹಬ್ಬದ ಮೊದಲ ದಿನವಾದ ಏಪ್ರಿಲ್ 2 ರಿಂದ ಲಭ್ಯವಿರುತ್ತದೆ. ವಿಶೇಷ ಮೆನುವಿನ ಬೆಲೆ 99 ರೂಪಾಯಿಯಿಂದ ಪ್ರಾರಂಭವಾಗಲಿದೆ.
ಈ ವಿಶೇಷ ನವರಾತ್ರಿ ಆಹಾರವು IRCTC ಅಡುಗೆ ಸೌಲಭ್ಯವನ್ನು ಒದಗಿಸುತ್ತಿರುವ ರೈಲುಗಳಲ್ಲಿ ಮಾತ್ರ ಲಭ್ಯವಿರುತ್ತದೆ. ಅಲ್ಲದೆ ರಾಜಧಾನಿ, ದುರಂತೋ, ಶತಾಬ್ದಿ ಸೇರಿದಂತೆ 500 ರೈಲುಗಳಲ್ಲಿ ಮಾತ್ರ ಈ ಫಾಸ್ಟ್ ಫುಡ್ ಲಭ್ಯವಾಗಲಿದೆ. ನವರಾತ್ರಿ ವಿಶೇಷ ಮೆನುವಿನಲ್ಲಿ ಏನೇನಿದೆ ನೋಡೋಣ.
ಸಾಬೂದಾನ ಟಿಕ್ಕಿ: ತಾಜಾ ತೆಂಗಿನ ಕಾಯಿ, ಸಾಬೂದಾನ ಮತ್ತು ಶೇಂಗಾದಿಂದ ತಯಾರಿಸಿದ ರುಚಿಕರ ಟಿಕ್ಕಿ ಉಪವಾಸ ಮಾಡುತ್ತಿರುವವರ ಕ್ರೇವಿಂಗ್ ಅನ್ನು ಕಡಿಮೆ ಮಾಡುತ್ತದೆ.
ಆಲೂ ಚಾಪ್ : ದಪ್ಪ ಮೊಸರಿನ ಜೊತೆಗೆ ಆಲೂ ಚಾಪ್ ಸರ್ವ್ ಮಾಡಲಾಗುತ್ತದೆ.
ಪನೀರ್ ಮಖ್ಮಲಿ, ಸಾಬೂದಾನ ಖಿಚಡಿ ನವರಾತ್ರಿ ಥಾಲಿ : ಇದರಲ್ಲಿ ಸಿಂಘಾಡಾ ಆಲೂ ಪರೋಟ, ಸಾಬೂದಾನ ಖಿಚಡಿ, ಪನೀರ್ ಮಖ್ಮಲಿ, ಅರ್ಬಿ ಮಸಾಲಾ, ಆಲೂ ಚಾಪ್, ಸೀತಾಫಲ ಹಣ್ಣಿನ ಖೀರು ಲಭ್ಯವಿದೆ.
ಮಾರ್ಚ್ 28ರಿಂದ್ಲೇ ಪ್ರಯಾಣಿಕರು ತಮಗೆ ಯಾವ ಥಾಲಿ ಬೇಕು ಅನ್ನೋದನ್ನು ಬುಕ್ ಮಾಡಬಹುದು. ಈಗಾಗ್ಲೇ ಟಿಕೆಟ್ ಬುಕ್ ಮಾಡಿದವರು, ಥಾಲಿ ಬೇಕೆನಿಸಿದರೆ ಇ-ಕೇಟರಿಂಗ್ ಮೂಲಕವೂ ಊಟದ ಬುಕ್ಕಿಂಗ್ ಮಾಡಲು ಅವಕಾಶವಿದೆ. ಇದಕ್ಕಾಗಿ 1323ಕ್ಕೆ ಕರೆ ಮಾಡಬೇಕು. ಒಟ್ಟು 4 ಬಗೆಯ ಥಾಲಿಗಳು ಲಭ್ಯವಿದೆ. ಇದರ ಬೆಲೆ 125-200 ರೂಪಾಯಿ.