ಶಿವಮೊಗ್ಗ: ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ತೆರಳುವವರಿಗೆ ಸಿಹಿ ಸುದ್ದಿ, ಇಂದಿನಿಂದ ಲಾಂಚ್ ನಲ್ಲಿ ವಾಹನಗಳ ಸಾಗಾಟ ಪುನರಾರಂಭವಾಗಿದೆ.
ಇಷ್ಟು ದಿನ ಮಳೆ ಕೊರತೆಯಿಂದಾಗಿ ಲಿಂಗನಮಕ್ಕಿ ಜಲಾಶಯದ ಹಿನ್ನೀರು ತಗ್ಗಿ ಸ್ಥಗಿತಗೊಳಿಸುವ ಸ್ಥಿತಿ ತಲುಪಿದ್ದ ಸಿಗಂದೂರು ಲಾಂಚ್ ಈಗ ಮಳೆ ಆರಂಭವಾದ ಹಿನ್ನೆಲೆಯಲ್ಲಿ ಹಿನ್ನೀರು ತುಂಬಿಕೊಂಡಿದೆ. ಇದರಿಂದ ಇಂದಿನಿಂದ ಸಾರಿಗೆ ಲಾಂಚ್ ಪುನರಾಂಭವಾಗಿದೆ.
ಸಾಗರ, ಶಿವಮೊಗ್ಗ ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಲ್ಲಿ ಏರಿಕೆಯಾಗಿದೆ. ವಿಶೇಷವಾಗಿ ಲಾಂಚ್ ನ ಪ್ಲಾಟ್ ಫಾಂ ಕಳಸವಳ್ಳಿ, ಅಂಬಾರಗೊಡ್ಡು, ಹೊಳೆಬಾಗಿಲು ಪ್ರದೇಶದಲ್ಲಿ ನೀರು ಏರಿಕೆಯಾಗಿದೆ. ಇದರಿಂದಾಗಿ ಇಂದಿನಿಂದ ಸಾರಿಗೆ ಲಾಂಚ್ ಆರಂಭವಾಗಲಿದೆ ಎಂದು ಕಡುವು ನಿರೀಕ್ಷಕ ಧನೇಂದ್ರ ಕುಮಾರ್ ತಿಳಿಸಿದ್ದಾರೆ.
ಹಿನ್ನೀರು ತಗ್ಗಿದ್ದರಿಂದ ಕಳೆದ 20 ದಿನಗಳಿಂದ ಲಾಂಚ್ ನಲ್ಲಿ ಜನರನ್ನು ಮಾತ್ರ ಸಾಗಿಸಲಾಗುತ್ತಿತ್ತು. ಈಗ ಹಿನ್ನೀರಿನಲ್ಲಿ ನೀರು ಏರಿದ್ದರಿಂದ ಲಾಂಚ್ ನಲ್ಲಿ ವಾಹನಗಳನ್ನು ಕೂಡ ತೆಗೆದುಕೊಂಡು ಹೋಗಲಾಗುತ್ತಿದೆ. ಲಾಂಚ್ ನಲ್ಲಿ ವಾಹನ ಸಾಗಾಟಕ್ಕೆ ಇಂದಿನಿಂದ ಅನುವು ಮಾಡಲಾಗುತ್ತಿದೆ ಎಂದಿದ್ದಾರೆ.