ದೇಶದಲ್ಲಿ ತ್ವರಿತವಾಗಿ ಸಾಲ ನೀಡುವ ಆಮಿಷವೊಡ್ಡುವ ಮೂಲಕ ಜನರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ಸುಮಾರು 300 ಚೀನಿ ಆಪ್ ಗಳ ನಿಷೇಧಕ್ಕೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಇವುಗಳನ್ನು ಆಪ್ ಸ್ಟೋರ್ ಗಳಿಂದಲೇ ತೆಗೆಸಿ ಹಾಕಲು ಚಿಂತನೆ ನಡೆದಿದೆ ಎನ್ನಲಾಗಿದೆ.
ತ್ವರಿತವಾಗಿ ಸಾಲ ನೀಡುತ್ತಿದ್ದ ಈ ಆಪ್ ಬಳಿಕ ಮರುಪಾವತಿ ನಿಧಾನವಾದ ಸಂದರ್ಭದಲ್ಲಿ ಕೆಲ ವ್ಯಕ್ತಿಗಳನ್ನು ಬಳಸಿಕೊಂಡು ಸಾಲ ಪಡೆದವರ ಖಾಸಗಿ ಚಿತ್ರಗಳನ್ನು ತಿರುಚಿ ಅವರ ಸಂಬಂಧಿಗಳು ಸ್ನೇಹಿತರಿಗೆ ಕಳುಹಿಸುವ ಮೂಲಕ ಅವಮಾನ ಮಾಡುತ್ತಿದ್ದವು.
ಈ ರೀತಿ ಬ್ಲಾಕ್ಮೇಲ್ ಗೆ ಒಳಗಾದ ಹಲವರು ಆತ್ಮಹತ್ಯೆಗೆ ಶರಣಾಗಿದ್ದರು. ಬ್ಲಾಕ್ ಮೇಲ್ ಮಾಡಿ ಸುಮಾರು 500 ಕೋಟಿ ರೂಪಾಯಿಗಳನ್ನು ಸಂಪಾದಿಸಿ ಅದನ್ನು ಚೀನಾಕ್ಕೆ ರವಾನಿಸಿದ್ದ 22 ಮಂದಿಯನ್ನು ಕೆಲದಿನಗಳ ಹಿಂದೆ ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದರು. ಇದಕ್ಕಾಗಿ ಇವರು ಪ್ರತ್ಯೇಕ ಕಾಲ್ ಸೆಂಟರ್ ಅನ್ನೇ ತೆರೆದಿದ್ದರು.
ಈ ಎಲ್ಲ ವಿಚಾರಗಳು ಕೇಂದ್ರ ಸರ್ಕಾರದ ಗಮನದಲ್ಲಿದ್ದು, ಹೀಗಾಗಿಯೇ ಈ ಆಪ್ ಗಳನ್ನು ನಿಷೇಧಿಸುವ ಮೂಲಕ ಸಾರ್ವಜನಿಕರಿಗೆ ನೆಮ್ಮದಿ ನೀಡಲು ಸಿದ್ಧತೆ ನಡೆಸಲಾಗಿದೆ.