ಆಪಲ್ ಕಂಪನಿ ಭಾರತದಲ್ಲಿ ಐಫೋನ್ 13 ಮೊಬೈಲ್ ನ ತಯಾರಿಕೆಯನ್ನು ಆರಂಭಿಸಿದೆ. ಈ ಮೂಲಕ ಉತ್ಪಾದನಾ ಶಕ್ತಿಯಾಗಿ ಹೊರಹೊಮ್ಮುವ ಭಾರತದ ಮಹದಾಸೆಗೆ ಮತ್ತಷ್ಟು ಬಲ ಬಂದಂತಾಗಿದೆ. ಐಫೋನ್ 13ಗೆ ಬೇಕಾದ ಪ್ರಮುಖ ಬಿಡಿಭಾಗಗಳನ್ನು ಆಪಲ್ ಕಂಪನಿಯ ಉತ್ಪಾದನಾ ಪಾಲುದಾರ ಫಾಕ್ಸ್‌ಕಾನ್ ಸಹಯೋಗದೊಂದಿಗೆ ಚೆನ್ನೈ ಸಮೀಪ ತಯಾರಿಸಲಾಗುತ್ತಿದೆ.
“ಐಫೋನ್ 13 ಅನ್ನು ಭಾರತದಲ್ಲಿ ತಯಾರಿಸಲು ನಾವು ಉತ್ಸುಕರಾಗಿದ್ದೇವೆ. ಫೋನ್ ನ ಸುಂದರವಾದ ವಿನ್ಯಾಸ, ಬೆರಗುಗೊಳಿಸುತ್ತದೆ. ಫೋಟೋಗಳು ಮತ್ತು ವೀಡಿಯೊಗಳಿಗಾಗಿ ಸುಧಾರಿತ ಕ್ಯಾಮೆರಾ ವ್ಯವಸ್ಥೆಗಳು ಈ ಫೋನ್ ನಲ್ಲಿವೆ” ಅಂತ ಆಪಲ್ ಕಂಪನಿ ಹೇಳಿದೆ. Apple ಕಂಪನಿ 2017ರಲ್ಲಿ iPhone SE ಯೊಂದಿಗೆ ಭಾರತದಲ್ಲಿ ಐಫೋನ್‌ಗಳನ್ನು ತಯಾರಿಸಲು ಪ್ರಾರಂಭಿಸಿತು.
ಪ್ರಸ್ತುತ ದೇಶದಲ್ಲಿ iPhone 11, iPhone 12 ಮತ್ತು ಈಗ iPhone 13 ಸೇರಿದಂತೆ ಅತ್ಯಾಧುನಿಕ ಮೊಬೈಲ್ ಗಳನ್ನು ಸಿದ್ಧಪಡಿಸಲಾಗ್ತಿದೆ. iPhone 13 ಸುಧಾರಿತ 5G ಅನುಭವವನ್ನು ಬಳಕೆದಾರರಿಗೆ ನೀಡುತ್ತದೆ. A15 ಬಯೋನಿಕ್ ಚಿಪ್‌ನೊಂದಿಗೆ ಸೂಪರ್-ಫಾಸ್ಟ್ ಕಾರ್ಯಕ್ಷಮತೆ ಮತ್ತು ವಿದ್ಯುತ್ ದಕ್ಷತೆಯನ್ನು ಇದು ಹೊಂದಿದೆ. ದೀರ್ಘ ಬ್ಯಾಟರಿ ಬಾಳಿಕೆ ಈ ಫೋನ್ ನ ಮತ್ತೊಂದು ವಿಶೇಷತೆ.
ಆಪಲ್ ಕಂಪನಿ ಹಾಗೂ ಭಾರತದ ನಡುವಣ ಸಂಬಂಧಕ್ಕೆ ಸುದೀರ್ಘ ಇತಿಹಾಸವೇ ಇದೆ. ಇದು 20 ವರ್ಷಗಳ ಹಿಂದೆ ಪ್ರಾರಂಭವಾಯಿತು. ಆಪಲ್ ತನ್ನ ಆನ್‌ಲೈನ್ ಸ್ಟೋರ್ ಅನ್ನು 2020 ಸೆಪ್ಟೆಂಬರ್ ನಲ್ಲಿ ಪ್ರಾರಂಭಿಸಿತ್ತು. ಸದ್ಯದಲ್ಲೇ ಭಾರತದಲ್ಲಿ ಆಫ್ ಲೈನ್ ಮಳಿಗೆಯನ್ನು ಕೂಡ ಆಪಲ್ ಕಂಪನಿ ಆರಂಭಿಸಲಿದೆ.