ಕ್ಯಾನ್ಸರ್ ವಿಶ್ವದ ಅತ್ಯಂತ ಅಪಾಯಕಾರಿ ಕಾಯಿಲೆ. ಇದಕ್ಕೆ ಚಿಕಿತ್ಸೆ ಕೂಡ ಸುಲಭವಿಲ್ಲ. ಪ್ರತಿ ವರ್ಷ ಲಕ್ಷಾಂತರ ಜನರು ಕ್ಯಾನ್ಸರ್ನಿಂದ ಸಾವನ್ನಪ್ಪುತ್ತಾರೆ. ಉತ್ತಮ ತಂತ್ರಜ್ಞಾನದ ಮೂಲಕ ಕ್ಯಾನ್ಸರ್ಗೆ ಚಿಕಿತ್ಸೆ ನೀಡಲಾಗುತ್ತಿದ್ದರೂ ರೋಗಿಗಳ ಸಾವಿನ ಸಂಖ್ಯೆ ಕಡಿಮೆಯಾಗಿಲ್ಲ. ಕ್ಯಾನ್ಸರ್ ರೋಗ ಲಕ್ಷಣಗಳ ಬಗ್ಗೆ ಮಾಹಿತಿಯ ಕೊರತೆಯಿಂದಾಗಿ ಜನರು ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಇದೀಗ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಲಸಿಕೆ ಪ್ರಯೋಗವೂ ನಡೆಯುತ್ತಿದೆ.
ಶೀಘ್ರದಲ್ಲೇ ಕ್ಯಾನ್ಸರ್ ವ್ಯಾಕ್ಸಿನ್ ಕೂಡ ಬರಬಹುದು. ಪ್ರಪಂಚದಾದ್ಯಂತ ಲಸಿಕೆ ಕುರಿತಾದ ಸಂಶೋಧನೆ ಮತ್ತು ಪ್ರಯೋಗಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತಿವೆ. ಲಸಿಕೆ ಸೂತ್ರೀಕರಣಗಳು, ಸಹಾಯಕಗಳು ಮತ್ತು ಇಮ್ಯುನೊಸ್ಟಿಮ್ಯುಲೇಟರಿ ತಂತ್ರಜ್ಞಾನಗಳನ್ನು ಅನ್ವೇಷಿಸಲು ಪ್ರಯತ್ನಗಳು ನಡೆಯುತ್ತಿವೆ. ಕೆಲವು ದೇಶಗಳಲ್ಲಿ ನಾಲ್ಕನೇ ಹಂತದ ಪ್ರಯೋಗವೂ ಮುಗಿದಿದೆ. ಶೀಘ್ರದಲ್ಲೇ ಈ ಮಾರಣಾಂತಿಕ ಕಾಯಿಲೆಗೆ ಪರಿಹಾರವನ್ನು ಕಂಡುಹಿಡಿಯಬಹುದು ಎಂದು ತಜ್ಞರು ನಂಬಿದ್ದಾರೆ.
ಪ್ರಿವೆಂಟಿವ್ ವ್ಯಾಕ್ಸಿನ್ – ಇದು ಮಾನವ ಪ್ಯಾಪಿಲೋಮವೈರಸ್ (HPV) ಲಸಿಕೆ ಮತ್ತು ಹೆಪಟೈಟಿಸ್ ಬಿ ಲಸಿಕೆಯನ್ನು (HBV) ಒಳಗೊಂಡಿದೆ. ಈ ಲಸಿಕೆಗಳು ಕೆಲವು ವೈರಸ್ಗಳ ವಿರುದ್ಧ ರಕ್ಷಣೆ ನೀಡುವಲ್ಲಿ ಪರಿಣಾಮಕಾರಿ. ಇವು ಭವಿಷ್ಯದಲ್ಲಿ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು. ಈ ಲಸಿಕೆ ಸಹಾಯದಿಂದ ಆರಂಭಿಕ ಸೋಂಕನ್ನು ನಿಲ್ಲಿಸಿ ಕ್ಯಾನ್ಸರ್ ಅಪಾಯವನ್ನು ಕಡಿಮೆಗೊಳಿಸಲಾಗುತ್ತದೆ.
ವೈದ್ಯಕೀಯ ಲಸಿಕೆ – ಈಗಾಗಲೇ ಕ್ಯಾನ್ಸರ್ನಿಂದ ಬಳಲುತ್ತಿರುವವರಿಗೆ ಈ ಲಸಿಕೆಗಳನ್ನು ನೀಡಲಾಗುತ್ತದೆ. ಈ ಲಸಿಕೆಗಳು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ಪ್ರತಿರಕ್ಷೆಯನ್ನು ನೀಡುತ್ತವೆ. ಇಲ್ಲಿಯವರೆಗೆ HPV ಚುಚ್ಚುಮದ್ದನ್ನು ಅನೇಕ ರೀತಿಯ ಕ್ಯಾನ್ಸರ್ ತಡೆಗಟ್ಟಲು ಶಿಫಾರಸು ಮಾಡಲಾಗಿದೆ. ಹೆಪಟೈಟಿಸ್ ಬಿ ಲಸಿಕೆ ಯಕೃತ್ತಿನ ಕ್ಯಾನ್ಸರ್ ತಡೆಗಟ್ಟಲು ಉತ್ತಮವೆಂದು ಪರಿಗಣಿಸಲಾಗಿದೆ. ಪ್ರಸ್ತುತ ಕ್ಯಾನ್ಸರ್ ಪೀಡಿತರನ್ನು ಗುಣಪಡಿಸುವಂತಹ ಯಾವುದೇ ಲಸಿಕೆ ಇಲ್ಲಿಯವರೆಗೆ ಬಂದಿಲ್ಲ.
ಆರೋಗ್ಯ ತಜ್ಞರ ಪ್ರಕಾರ ಕ್ಯಾನ್ಸರ್ ಲಸಿಕೆಯನ್ನು ಪರಿಚಯಿಸಿದ ನಂತರ ಕೀಮೋಥೆರಪಿ ಅವಶ್ಯಕತೆ ಅಂತ್ಯವಾಗಬಹುದು. ಯಾಕೆಂದರೆ ಕೀಮೋಥೆರಪಿ ಚಿಕಿತ್ಸೆಯು ಕೆಟ್ಟ ಜೀವಕೋಶಗಳೊಂದಿಗೆ ಕೆಲವು ಒಳ್ಳೆಯ ಜೀವಕೋಶಗಳನ್ನು ಕೂಡ ನಾಶಪಡಿಸುತ್ತದೆ. ಇದರ ದುಷ್ಪರಿಣಾಮಗಳು ರೋಗಿಯ ದೇಹದ ಮೇಲೂ ಕಂಡುಬರುತ್ತವೆ. ಹಾಗಾಗಿ ವ್ಯಾಕ್ಸಿನ್ ಬಂದ ಬಳಿಕ ಕಿಮೋಥೆರಪಿಯನ್ನು ನಿಲ್ಲಿಸಬಹುದು. ಆದರೆ ಶಸ್ತ್ರಚಿಕಿತ್ಸೆ ಮುಂದುವರಿಯುತ್ತದೆ. ಏಕೆಂದರೆ ಟ್ಯೂಮರ್ ಅನ್ನು ಶಸ್ತ್ರಚಿಕಿತ್ಸೆಯಿಂದ ಮಾತ್ರ ತೆಗೆದುಹಾಕಬಹುದು.
ಲಸಿಕೆ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆಯೇ ?
ಕ್ಯಾನ್ಸರ್ ಲಸಿಕೆ ಈ ಮಾರಣಾಂತಿಕ ರೋಗವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಈ ಲಸಿಕೆ ಕ್ಯಾನ್ಸರ್ ಕೋಶಗಳನ್ನು ಗುರುತಿಸಲು ಮತ್ತು ಅವುಗಳ ವಿರುದ್ಧ ಹೋರಾಡಲು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದರಿಂದ ಚಿಕಿತ್ಸೆಯನ್ನು ಉತ್ತಮಗೊಳಿಸಬಹುದು.