ಬೆಂಗಳೂರು: ರಾಜ್ಯದಲ್ಲಿ ಕೊರೊನಾ ರೂಪಾಂತರಿ ಹೊಸ ವೈರಸ್ ಒಮಿಕ್ರಾನ್ ಪತ್ತೆಯಾಗಿಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿಗೆ ಆಗಮಿಸಿದ್ದ ದಕ್ಷಿಣ ಆಫ್ರಿಕಾದ ಇಬ್ಬರು ಪ್ರಯಾಣಿಕರಲ್ಲಿ ನಿನ್ನೆ ಕೋವಿಡ್ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ರೂಪಾಂತರಿ ವೈರಸ್ ಆತಂಕ ಎದುರಾಗಿತ್ತು. ಇದೀಗ ಈ ಕುರಿತು ಸ್ಪಷ್ಟನೆ ನೀಡಿರುವ ಸಿಎಂ ಬೊಮ್ಮಾಯಿ, ರಾಜ್ಯದಲ್ಲಿ ಒಮಿಕ್ರಾನ್ ವೈರಸ್ ಪತ್ತೆಯಾಗಿಲ್ಲ. ವಿದೇಶದಿಂದ ಬಂದವರನ್ನು ಏರ್ ಪೋರ್ಟ್ ನಲ್ಲಿ ಕಟ್ಟುನಿಟ್ಟಿನ ತಪಾಸಣೆಗೆ ಒಳಪಡಿಸಲಾಗಿದೆ. ನೆಗೆಟೀವ್ ಬಂದರೆ ಮಾತ್ರ ಏರ್ಬ್ಪೋರ್ಟಿನಿಂದ ಹೊರ ಬಿಡಲಾಗುವುದು. ಇಲ್ಲದಿದ್ದರೆ ಅವರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಮುಂದುವರೆಸಲಾಗುತ್ತದೆ ಎಂದರು.
ಬೂಸ್ಟರ್ ಡೋಸ್ ನೀಡಲು ಕೇಂದ್ರದ ಜೊತೆ ಚರ್ಚೆ ನಡೆಸಲಾಗಿದೆ. ಕೇಂದ್ರದಿಂದ ಅನುಮತಿ ದೊರೆತ ಕೂಡಲೇ ಬೂಸ್ಟರ್ ಡೋಸ್ ಕೊಡಲಾಗುವುದು. ಸರ್ಕಾರಿ ನೌಕರರು 2 ಡೋಸ್ ಲಸಿಕೆ ಪಡೆಯುವುದು ಕಡ್ಡಾಯ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕೆಲಸ ಮಾಡುವವರಿಗೆ 2 ಡೋಸ್ ಲಸಿಕೆ ಕಡ್ಡಾಯವಾಗಿದೆ ಎಂದು ಹೇಳಿದರು.
ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿದೆ. ಹೀಗಾಗಿ ಆಯಾ ಜಿಲ್ಲೆಗಳಲ್ಲಿ ಕಟ್ಟುನಿಟ್ತಿನ ಕ್ರಮಕ್ಕೆ ಸೂಚಿಸಲಾಗಿದೆ. ಇನ್ನು ಕೇರಳ, ಮಹಾರಾಷ್ಟ್ರ ಸೇರಿದತೆ ಗಡಿಗಳಲ್ಲಿ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ. ಕೇರಳದಿಂದ ಆಗಮಿಸಿದವರಿಗೆ ಮತ್ತೊಮ್ಮೆ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ ಎಂದು ತಿಳಿಸಿದರು.