ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಒಟ್ಟು 2,120 ದೈಹಿಕ ಶಿಕ್ಷಣ ಶಿಕ್ಷಕರ ಗ್ರೇಡ್ 2 ಹುದ್ದೆಗಳು ಖಾಲಿ ಇದ್ದು, ಇವುಗಳ ಭರ್ತಿಗೆ ಆರ್ಥಿಕ ಇಲಾಖೆಯ ಅನುಮೋದನೆ ಕೋರಲಾಗಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ವಿಧಾನಪರಿಷತ್ತಿನಲ್ಲಿ ಈ ವಿಷಯ ತಿಳಿಸಿದ್ದು, ಪ್ರಸ್ತುತ 200 ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ನೇರ ನೇಮಕಾತಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ ಎಂದು ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಅವರ ಪ್ರಶ್ನೆಗೆ ಉತ್ತರಿಸಿರುವ ಅವರು, ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್ 2 ಹುದ್ದೆಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದರೆ ಕೂಡಲೇ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.