ಬೆಂಗಳೂರು: ಕೊರೊನಾ ಸೋಂಕಿನಿಂದ ತಂದೆ-ತಾಯಿ ಕಳೆದುಕೊಂಡ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡಲು ನಿರ್ಧರಿಸಿರುವುದಾಗಿ ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ತಿಳಿಸಿದ್ದಾರೆ.
ಖಾಸಗಿ ಶಾಲೆ-ಕಾಲೇಜುಗಳ ಆಡಳಿತ ಮಂಡಳಿ ಒಕ್ಕೂಟದ ಸಭೆಯಲ್ಲಿ 12ಕ್ಕೂ ಹೆಚ್ಚು ಖಾಸಗಿ ಶಿಕ್ಷಣ ಸಂಸ್ಥೆಗಳು ಈ ಬಗ್ಗೆ ನಿರ್ಧರಿಸಿದ್ದು, ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುವುದು. ನಮ್ಮ ಸಂಘಟನೆಗಳ ಅಡಿಯಲ್ಲಿ ಬರುವ ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡುತ್ತೇವೆ ಎಂದರು.
ಇನ್ನು ಖಾಸಗಿ ಶಾಲೆಗಳ ಶುಲ್ಕದ ವಿಚಾರವಾಗಿ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತೆ ಅದನ್ನು ಪಾಲಿಸುತ್ತೇವೆ. ಸರ್ಕಾರ ನಿಗದಿ ಮಾಡಿದ ಶುಲ್ಕ ಪಡೆಯಲು ಸಿದ್ಧ. ನಾವು ಪೋಷಕರಿಗೆ ಶುಲ್ಕದ ವಿಚಾರವಾಗಿ ಯಾವುದೇ ಒತ್ತಡ ಹೇರಿಲ್ಲ ಎಂದು ಹೇಳಿದರು.