ದೂರದ ಊರುಗಳಲ್ಲಿ ಮದುವೆ ಸೇರಿ ಯಾವುದೇ ಸಮಾರಂಭಗಳಿಗೆ ಕುಟುಂಬಸ್ಥರೆಲ್ಲರೂ ಸೇರಿ ಒಂದೇ ರೈಲಿನಲ್ಲಿ ಸಂಚರಿಸುವುದು ಯಾರಿಗಾದರೂ ಒಳ್ಳೆಯ ಅನುಭವವೇ. ಆದರೆ, ಎಲ್ಲರಿಗೂ ಟಿಕೆಟ್ ರಿಸರ್ವೇಷನ್ ಮಾಡಿಸುವುದು ತುಂಬಾ ಸವಾಲಿನ ಕೆಲಸ.
ಕೆಲವೊಮ್ಮೆ ನಮಗೆ ಬೇಕಾದ ಬರ್ತ್ ಸಿಗುವುದಿಲ್ಲ, ಇನ್ನೂ ಕೆಲವೊಮ್ಮೆ ವೇಟಿಂಗ್ ಲಿಸ್ಟ್ ನೋಡುತ್ತ ಕೂರಬೇಕಾಗುತ್ತದೆ. ಆದರೆ, ಇದಕ್ಕೆ ಭಾರತೀಯ ರೈಲ್ವೆ ಇಲಾಖೆಯು ಪರಿಹಾರ ಕಂಡುಕೊಂಡಿದೆ. ಇನ್ನು ಮುಂದೆ ಯಾವುದೇ ಸಮಾರಂಭಗಳಲ್ಲಿ ನೂರಾರು ಕುಟುಂಬಸ್ಥರು ಒಂದೇ ರೈಲಿನಲ್ಲಿ ಸಂಚರಿಸಬಹುದಾಗಿದೆ.
ರೈಲ್ವೆ ಇಲಾಖೆಯು ಜನರು ಮುಂದಿನ ದಿನಗಳಲ್ಲಿ ಇಡೀ ಬೋಗಿ ಅಥವಾ ಒಂದಿಡೀ ರೈಲನ್ನೇ ಬುಕ್ ಮಾಡುವ ಅವಕಾಶ ಕಲ್ಪಿಸಿದೆ. ಇದರಿಂದಾಗಿ ನೂರಾರು ಜನರು ಒಮ್ಮೆಯೇ ಒಂದಿಡೀ ಬೋಗಿಯನ್ನು ಬುಕ್ ಮಾಡಬಹುದು. ಅದ್ಧೂರಿಯಾಗಿ ಮದುವೆ ಇದ್ದರೆ 18 ಬೋಗಿಗಳ ಇಡೀ ರೈಲನ್ನೇ ಬುಕ್ ಮಾಡಬಹುದು.
ಇದರಿಂದ ಟಿಕೆಟ್ ಬುಕ್ಕಿಂಗ್ ತಲೆನೋವು ಕಡಿಮೆಯಾಗುವ ಜತೆಗೆ ಹಣದ ಉಳಿತಾಯವೂ ಆಗುತ್ತದೆ. ಸಮಾರಂಭದ ಒಂದಷ್ಟು ದಿನಗಳ ಮೊದಲು ಸಮೀಪದ ರೈಲು ನಿಲ್ದಾಣಕ್ಕೆ ತೆರಳಿ ಇಡೀ ಬೋಗಿ ಅಥವಾ ರೈಲು ಬುಕ್ ಮಾಡಬಹುದಾಗಿದೆ.
ಒಂದು ಕೋಚ್ ಬುಕ್ ಮಾಡಬೇಕಾದರೆ ಇಂತಿಷ್ಟು ಎಂದು, ಇಡೀ ರೈಲು ಬುಕ್ ಮಾಡಬೇಕಾದರೆ ಇಂತಿಷ್ಟು ಎಂದು ಠೇವಣಿ ಇಡಬೇಕಾಗುತ್ತದೆ. ನಿಮ್ಮ ಪ್ರಯಾಣ ಮುಗಿದ ಮೇಲೆ ಠೇವಣಿ ವಾಪಸ್ ನೀಡಲಾಗುತ್ತದೆ.
ಜಿ.ಎಸ್.ಟಿ. ಪ್ರತ್ಯೇಕವಾಗಿ ಅನ್ವಯವಾಗಲಿದೆಯಾದರೂ ಮದುವೆ ಸೇರಿ ಹಲವು ಸಮಾರಂಭಗಳಿಗೆ ಮೊದಲು ಪಾವತಿಸಬೇಕಿದ್ದ ಶೇ.30 ರಷ್ಟು ಹೆಚ್ಚಿನ ಹಣದ ಉಳಿತಾಯವಾಗಲಿದೆ. ಹಾಗಾಗಿ ಬಹಳಷ್ಟು ಜನ ರೈಲ್ವೆ ಇಲಾಖೆಯ ಹೊಸ ಯೋಜನೆಯನ್ನು ಸ್ವಾಗತಿಸಿದ್ದಾರೆ.