ಮೈಸೂರು: ಗೋಲ್ ಗುಂಬಜ್ ಎಕ್ಸ್ ಪ್ರೆಸ್ ರೈಲಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಗೆ ಚೂರಿ ಇರಿದ ಪ್ರಕರಣ ಸಂಬಂಧ 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರು-ಬೆಂಗಳೂರು ನಡುವೆ ಚಲಿಸುತ್ತಿದ್ದ ಗೋಲ್ ಗುಂಬಜ್ ಎಕ್ಸ್ ಪ್ರೆಸ್ ರೈಲಿನಲ್ಲಿ ದರೋಡೆ ಹಾಗೂ ಕಳ್ಳತನ ಆರೋಪ ಹಿನ್ನೆಲೆಯಲ್ಲಿ ಕಾನ್ಸ್ ಟೇಬಲ್ ಸತೀಶ್ ಚಂದ್ರ ಅವರನ್ನು ಭದ್ರತಾ ಮೇಲ್ವಿಚಾರಣೆಗೆ ನೇಮಿಸಲಾಗಿತ್ತು. ಎಸ್.5 ಬೋಗಿಯ ವಿಶ್ರಾಂತಿ ಕೊಠಡಿ ಬಳಿ 6 ಯುವಕರ ಗುಂಪು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಅಲ್ಲದೇ ಪ್ರಯಾಣಿಕರ ಬಗ್ಗೆ ಅಸಭ್ಯವಾಗಿ ಕಮೆಂಟ್ ಮಾಡುತ್ತಿದ್ದರು.
ಧೂಮಪಾನ ಮಾಡುತ್ತಾ ಪ್ರಯಾಣಿಕರಿಗೂ ತೊಂದರೆ ಕೊಡುತ್ತಿದ್ದರು. ಇದನ್ನು ಗಮನಿಸಿದ ಸತೀಶ್ ಚಂದ್ರ ಪ್ರಯಾಣಿಕರಿಗೆ ತೊಂದರೆ ಕೊಡದಂತೆ ಎಚ್ಚರಿಸಿದ್ದಾರೆ. ಈ ವೇಳೆ ಕಾನ್ಸ್ಟೇಬಲ್ ಜೊತೆ ವಾಗ್ವಾದಕ್ಕಿಳಿದ ಆರೋಪಿಗಳು ಹಲ್ಲೆ ನಡೆಸಿ ಬೆನ್ನಿಗೆ ಚೂರಿಯಿಂದ ಇರಿದಿದ್ದಾರೆ. ಗಾಯಗೊಂಡು ರಕ್ತಸ್ರಾವವಾಗುತ್ತಿದ್ದರೂ ಕಾನ್ಸ್ ಟೇಬಲ್ ಪ್ರಯಾಣಿಕರ ಸಹಾಯದಿಂದ ಇಬ್ಬರನ್ನು ವಶಕ್ಕೆ ಪಡೆದಿದ್ದರು.
ಘಟನೆ ನಡೆದ 24 ಗಂಟೆಯಲ್ಲಿಯೇ ಒಟ್ಟು 6 ಆರೋಪಿಗಳನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಮೊಹಮ್ಮದ್ ಇರ್ಫಾನ್, ದರ್ಶನ್, ಫೈಸಲ್ ಖಾನ್, ಮೊಹಮ್ಮದ್ ಇಮ್ರಾನ್, ಮೋಯಿನ್ ಪಾಷಾ ಹಾಗೂ ಮುನಿರಾಜು ಎಂದು ಗುರುತಿಸಲಾಗಿದೆ. ಎಲ್ಲಾ ಆರೋಪಿಗಳು 19ರಿಂದ 24 ವರ್ಷದೊಳಗಿನವರಾಗಿದ್ದಾರೆ.