ಪ್ರಭಾವಿಗಳ ಅಥವಾ ಖ್ಯಾತನಾಮರ ಬಳಿ ಇರುವ ಹಣ, ಆಸ್ತಿಗಳ ಬಗ್ಗೆ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಆಗಾಗ್ಗೆ ಚರ್ಚೆಯಾಗುತ್ತವೆ. ಇದು ಸಾಮಾನ್ಯವಾಗಿ ಸಾಂಪ್ರದಾಯಿಕ ವೃತ್ತಿಪರರನ್ನು ಆಶ್ಚರ್ಯಗೊಳಿಸುತ್ತದೆ.
ಲಾಭದಾಯಕ ವೇತನಕ್ಕಾಗಿ ಅನೇಕರು ತಮ್ಮದೇ ಆದ ಸ್ವಂತ ಉದ್ದಿಮೆಯನ್ನು ಪ್ರಾರಂಭಿಸುತ್ತಾರೆ. ಇದೀಗ ಗೋಲ್ಡನ್ ರಿಟ್ರೈವರ್ ನಾಯಿಯೊಂದು ವರ್ಷಕ್ಕೆ ಡಾಲರ್ 1 ಮಿಲಿಯನ್ (ಅಂದಾಜು ₹ 8 ಕೋಟಿ) ಗಳಿಸುತ್ತದೆಯಂತೆ.
ಹೌದು, ಈ ಸುದ್ದಿ ಕೇಳಿದ್ರೆ ಖಂಡಿತ ನಿಮಗೆ ಅಚ್ಚರಿಯೆನಿಸಬಹುದಾದ್ರೂ ಇದು ಸತ್ಯ. ಪೋರ್ಟ್ರೇಟ್ ಕಂಪನಿ ಪ್ರಿಂಟೆಡ್ ಪೆಟ್ ಮೆಮೊರೀಸ್‌ನ ಸಂಶೋಧನೆಯ ಪ್ರಕಾರ, ಸಾಮಾಜಿಕ ಮಾಧ್ಯಮದ ಪ್ರಭಾವಶಾಲಿಗಳ ಪೈಕಿ ಶ್ವಾನ ಟಕರ್ ಬಡ್ಜಿನ್ ನಂ. 1 ಆಗಿದೆಯಂತೆ. ಮಿಲಿಯನೇರ್ ಆಗಿರುವ ಈ ಶ್ವಾನವು, ಎರಡು ವರ್ಷ ವಯಸ್ಸಿನಿಂದಲೂ ಪ್ರಾಯೋಜಿತ ಜಾಹೀರಾತುಗಳಿಂದ ವಾರ್ಷಿಕವಾಗಿ ಡಾಲರ್ 1 ಮಿಲಿಯನ್ ನಷ್ಟು ಹಣ ಗಳಿಸುತ್ತದೆ.
ಯೂಟ್ಯೂಬ್ ನಿಂದ 30 ನಿಮಿಷದ ಪೋಸ್ಟ್ ಗೆ ಡಾಲರ್ 40,000 ರಿಂದ ಡಾಲರ್ 60,000 ವರೆಗೆ ಇರುತ್ತದೆ ಎಂದು ಟಕರ್‌ನ ಮಾಲೀಕ ಕರ್ಟ್ನಿ ಬಡ್ಜಿನ್ ತಿಳಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲೂ ಸುಮಾರು ಡಾಲರ್ 20,000 ದಷ್ಟು ಹಣ ಗಳಿಸುತ್ತಿದೆಯಂತೆ. ಜೂನ್ 2018 ರಲ್ಲಿ 8 ವಾರಗಳ ವಯಸ್ಸಿನಲ್ಲಿ ಟಕ್ಕರ್ ನ ಇನ್‌ಸ್ಟಾಗ್ರಾಮ್ ಪುಟವನ್ನು ತೆರೆಯಲಾಯಿತು. ಮುಂದಿನ ತಿಂಗಳಲ್ಲೇ, ಅದರ ಮೊದಲ ವಿಡಿಯೋ ವೈರಲ್ ಆಯಿತು. ಕೇವಲ ಆರು ತಿಂಗಳಲ್ಲೇ 60,000 ಫಾಲೋವರ್ಸ್ ಅನ್ನು ಹೊಂದಿತು.
ಇದೀಗ ಟಕ್ಕರ್ ಟಿಕ್‌ಟಾಕ್‌ನಲ್ಲಿ 11.1 ಮಿಲಿಯನ್, ಯೂಟ್ಯೂಬ್‌ನಲ್ಲಿ 5.1 ಮಿಲಿಯನ್ ಮತ್ತು ಫೇಸ್‌ಬುಕ್‌ನಲ್ಲಿ 4.3 ಮಿಲಿಯನ್ ಅನುಯಾಯಿಗಳನ್ನು ಹೊಂದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಒಟ್ಟು 25 ಮಿಲಿಯನ್ ಅನುಯಾಯಿಗಳನ್ನು ಹೊಂದಿದೆ.