ನವದೆಹಲಿ: ಬೃಹತ್ ಕಾರ್ಯಾಚರಣೆಯಲ್ಲಿ 42 ಕೋಟಿ ರೂ. ಮೌಲ್ಯದ 85 ಕೆ.ಜಿ.ಗೂ ಹೆಚ್ಚು ಚಿನ್ನವನ್ನು ಆದಾಯ ಗುಪ್ತಚರ ನಿರ್ದೇಶನಾಲಯವು ದೆಹಲಿ ಮತ್ತು ಗುರುಗ್ರಾಮದಲ್ಲಿ ವಶಪಡಿಸಿಕೊಂಡಿದೆ.
ದೆಹಲಿಯ ಚತ್ತರ್‌ಪುರ ಮತ್ತು ನೆರೆಯ ಜಿಲ್ಲೆ ಗುರುಗ್ರಾಮದ ಹಲವೆಡೆ ಶೋಧ ಕಾರ್ಯಾಚರಣೆ ನಡೆಸಿದ ನಂತರ ಅಧಿಕಾರಿಗಳು ಅಪಾರ ಪ್ರಮಾಣದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಕುತೂಹಲಕಾರಿ ಅಂಶವೆಂದ್ರೆ, ಚಿನ್ನವನ್ನು ಯಂತ್ರದ ಭಾಗಗಳ ರೂಪದಲ್ಲಿ ಕಳ್ಳಸಾಗಣೆ ಮಾಡಲಾಗುತ್ತಿತ್ತು ಮತ್ತು ವಿವಿಧ ಆಕಾರಗಳಲ್ಲಿ ಕರಗಿಸಿ ಅಚ್ಚು ಮಾಡಲಾಗುತ್ತಿತ್ತು.
ಯಂತ್ರದ ಭಾಗಗಳ ರೂಪದಲ್ಲಿ ಕಳ್ಳಸಾಗಣೆ ಮಾಡಲಾದ ಚಿನ್ನವನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ವಿಲೇವಾರಿ ಮಾಡುವ ಮೊದಲು ಕರಗಿಸಿ ವಿವಿಧ ಆಕಾರಗಳಲ್ಲಿ (ಬಾರ್, ಸಿಲಿಂಡರ್ ಆಕಾರ) ರೂಪಿಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ನಾಲ್ವರು ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಇಬ್ಬರು ದಕ್ಷಿಣ ಕೊರಿಯಾದವರಾಗಿದ್ದರೆ, ಇನ್ನಿಬ್ಬರು ಚೀನಾ ಮತ್ತು ತೈವಾನ್ ದೇಶದ ಪ್ರಜೆಗಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವಾರದ ಆರಂಭದಲ್ಲಿ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 1 ಕೋಟಿ ರೂ. ಮೌಲ್ಯದ 2.5 ಕೆಜಿ ಚಿನ್ನವನ್ನು ಕಸ್ಟಮ್ಸ್ ಇಲಾಖೆ ವಶಪಡಿಸಿಕೊಂಡಿತ್ತು. ನವೆಂಬರ್ 16 ರಂದು, ದುಬೈನಿಂದ ಬಂದ ವಿಮಾನದಲ್ಲಿ ಸೀಟಿನ ಕೆಳಗೆ ಲೈಫ್ ಜಾಕೆಟ್‌ನಲ್ಲಿ ಚಿನ್ನವನ್ನು ಬಚ್ಚಿಟ್ಟಿದ್ದನ್ನು ಅಧಿಕಾರಿಗಳು ಪತ್ತೆ ಮಾಡಿದ್ದರು.