ನವದೆಹಲಿ: ಕಳೆದ 11 ತಿಂಗಳ ಅವಧಿಯಲ್ಲಿ ಚಿನ್ನದ ದರ 10 ಗ್ರಾಂ ಗೆ 20,180 ರೂಪಾಯಿ ಹೆಚ್ಚಳವಾಗಿದೆ. ಅಖಿಲ ಭಾರತ ಸರಾಫ್ ಅಸೋಸಿಯೇಷನ್ ಗುರುವಾರ ಬಗ್ಗೆ ಮಾಹಿತಿ ನೀಡಿದೆ.
ಕಳೆದ ವರ್ಷದ ಫೆಬ್ರವರಿ 23ರಂದು 62,720 ರೂ. ಇದ್ದ ಚಿನ್ನದ ದರ ಪ್ರಸಕ್ತ ಜನವರಿ 23ರ ವೇಳೆಗೆ 82,900 ರೂ.ಗೆ ಏರಿಕೆಯಾಗಿದೆ. ಶೇಕಡ 32ರಷ್ಟು ಚಿನ್ನದ ದರ ಹೆಚ್ಚಳವಾಗಿರುವುದಾಗಿ ಹೇಳಲಾಗಿದೆ.
ಗುರುವಾರ ದೆಹಲಿ ಚಿನಿವಾರ ಪೇಟೆಯಲ್ಲಿ ಶೇಕಡ 99.9 ರಷ್ಟು ಪರಿಶುದ್ಧತೆಯ 10 ಗ್ರಾಂ ಚಿನ್ನದ ದರ 170 ರೂಪಾಯಿ ಹೆಚ್ಚಳವಾಗಿದ್ದು 82,900 ಗೆ ಮಾರಾಟವಾಗಿದೆ. ಇದು ಇದುವರೆಗಿನ ಸಾರ್ವಕಾಲಿಕ ಗರಿಷ್ಠ ದರ ಆಗಿದೆ. ಶೇಕಡ 99.5 ಪರಿಶುದ್ಧತೆಯ ಸ್ಟ್ಯಾಂಡರ್ಡ್ ಚಿನ್ನದ ದರ ಕೂಡ 170 ರೂ. ಏರಿಕೆಯಾಗಿದ್ದು, 82,500 ರೂಪಾಯಿಗೆ ತಲುಪಿದೆ.
ಬೆಳ್ಳಿ ದರ ಕೆಜಿಗೆ 500 ರೂಪಾಯಿ ಇಳಿಕೆಯಾಗಿದ್ದು 93,500 ರೂ.ಗೆ ಮಾರಾಟವಾಗಿದೆ. ಆಭರಣ ತಯಾರಕರು ಮತ್ತು ಚಿಲ್ಲರೆ ಮಾರಾಟಗಾರರಿಂದ ಚಿನ್ನದ ಖರೀದಿ ಹೆಚ್ಚಳವಾಗಿದೆ. ಅಲ್ಲದೇ ಜಾಗತಿಕ ಮಾರುಕಟ್ಟೆಯಲ್ಲಿಯೂ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿರುವುದರಿಂದ ದರ ಏರುಗತಿಯಲ್ಲಿದೆ ಎಂದು ಹೇಳಲಾಗಿದೆ.