ಭಾರತೀಯರ ಅತ್ಯಂತ ನೆಚ್ಚಿನ ಆಭರಣ ಎಂದರೆ ಚಿನ್ನದಿಂದ ತಯಾರಿಸಿದ ಆಭರಣಗಳು. ಈ ಚಿನ್ನವನ್ನು ಆಪತ್ಕಾಲದ ನೆಂಟ ಎಂದು ಕೂಡ ಭಾರತದ ಜನತೆ ಭಾವಿಸಿದ್ದಾರೆ. ಹಾಗಾಗಿಯೇ ವಜ್ರ, ಪ್ಲ್ಯಾಟಿನಮ್‌ಗಳಂತಹ ವಿದೇಶಿ ಆಭರಣಗಳ ವ್ಯಾಮೋಹಕ್ಕೆ ಇಂದಿಗೂ ಕೂಡ ಭಾರತೀಯರು ಮರುಳಾಗಿಲ್ಲ. ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿ ’’ಚಿನ್ನ’’ದಂತಹ ಬಂಗಾರವೇ ಮೇಲುಗೈ ಸಾಧಿಸಿದೆ. ಅಂತಹ ಚಿನ್ನದ ದರವು ಕಳೆದ 10 ದಿನಗಳಲ್ಲಿ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದೆ.
10 ದಿನಗಳಿಂದ ಸತತ ಏರಿಕೆ ಕಂಡ ಪ್ರತಿ ಗ್ರಾಂ. ಚಿನ್ನದ ಬೆಲೆಯು ಶುಕ್ರವಾರಕ್ಕೆ ಒಟ್ಟಾರೆ 1500 ರೂ. ಹೆಚ್ಚಳ ದಾಖಲಿಸಿದೆ. ಅಂದರೆ, ಮಾರುಕಟ್ಟೆಯಲ್ಲಿ ಒಂದು ಗ್ರಾಂ. ಚಿನ್ನದ ಬೆಲೆಯು 49,500 ರೂ.ವರೆಗೆ ಮುಟ್ಟಿದೆ. ಅಲ್ಲಿಗೆ, ಒಂದು ಗ್ರಾಂ. ಚಿನ್ನವು ಬರೋಬ್ಬರಿ ಅರ್ಧ ಲಕ್ಷ ರೂಪಾಯಿ ಮುಟ್ಟಲು ಬೇಕಿರುವುದು ಕೇವಲ 500 ರೂ. ಹೆಚ್ಚಳ ಮಾತ್ರವೇ. ಇದು ಕೂಡ ಮುಂದಿನ ಎರಡು ವಾರಗಳಲ್ಲಿ ಸಾಧ್ಯವಾಗಲಿದೆ ಎನ್ನುತ್ತಿದ್ದಾರೆ ಆಭರಣ ಮಳಿಗೆಗಳವರು.
ಚಿನ್ನವು ಇಷ್ಟೊಂದು ದುಬಾರಿ ಆಗಲು ಕಾರಣ, ಕಳೆದ 31 ವರ್ಷಗಳಲ್ಲೇ ಕಂಡಿರದ ಹಣದುಬ್ಬರಕ್ಕೆ ಅಮೆರಿಕ ತುತ್ತಾಗಿರುವುದು. ಜತೆಗೆ ಭಾರತದಲ್ಲಿ ಚಿನ್ನಕ್ಕಾಗಿ ಬೇಡಿಕೆ ದಿನೇದಿನೆ ದಾಖಲೆ ಪ್ರಮಾಣದಲ್ಲಿ ಹೆಚ್ಚುತ್ತಿದೆಯಂತೆ. ವಿಶ್ವ ಚಿನ್ನದ ಮಂಡಳಿ (ಡಬ್ಲೂಜಿಸಿ) ಪ್ರಕಾರ ಈ ವರ್ಷ ಭಾರತದಲ್ಲಿ ಚಿನ್ನದ ಗಟ್ಟಿ ಖರೀದಿಯು 47% ಹೆಚ್ಚಳ ಕಂಡಿದೆ. ಅದೇ ರೀತಿ ಚಿನ್ನದ ಆಭರಣಗಳ ಖರೀದಿ ಕೂಡ ಸಾಮಾನ್ಯಕ್ಕಿಂತ 58% ಏರಿಕೆ ದಾಖಲಿಸಿದೆ. ಕೊರೊನಾ ಹಾವಳಿ ತಿಳಿಯಾಗುತ್ತಿರುವ ಖುಷಿಯಲ್ಲಿ ಜನರು ಮದುವೆ, ಜನ್ಮದಿನ ಸಮಾರಂಭ, ಗೃಹಪ್ರವೇಶದಂತಹ ಶುಭ ಸಮಾರಂಭಗಳನ್ನು ಬೇಗನೇ ಮಾಡಿ ಮುಗಿಸುತ್ತಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ದಿನೇದಿನೆ ಚಿನ್ನಕ್ಕಾಗಿ ಬೇಡಿಕೆ ದುಪ್ಪಟ್ಟಾಗುತ್ತಿದೆ ಎನ್ನುತ್ತಾರೆ ತಜ್ಞರು.