ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ ನಲ್ಲಿ ಚಿನ್ನದ ದರವು ಇಳಿಕೆ ಕಂಡಿದೆ. ಇಂದು ಶೇಕಡಾ 0.25ರಷ್ಟು ಇಳಿಕೆ ಕಂಡಿದ್ದು, 10 ಗ್ರಾಂ ಚಿನ್ನದ ಬೆಲೆ 47,510 ರೂಪಾಯಿಗೆ ತಲುಪಿದೆ. ಸರಕು ತಜ್ಞರ ಪ್ರಕಾರ, ಚಿನ್ನದ ಬೆಲೆಗಳ ಕುಸಿತವು ಹಳದಿ ಲೋಹವನ್ನು ಖರೀದಿಸುವವರಿಗೆ ಉತ್ತಮ ಅವಕಾಶವಾಗಿದೆ.
ಶುಕ್ರವಾರ ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ ನಲ್ಲಿ ಚಿನ್ನದ ಬೆಲೆ ಇಳಿಕೆ ಕಂಡಿತ್ತು. 10 ಗ್ರಾಂ ಚಿನ್ನದ ಬೆಲೆ 108 ರೂಪಾಯಿ ಇಳಿಕೆ ಕಂಡು 47,526 ರೂಪಾಯಿಯಾಗಿತ್ತು. ಎಂಸಿಎಕ್ಸ್ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 46,850 ರಿಂದ 48,400 ರವರೆಗೆ ಇರಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಬಂಗಾರದ ಬೆಲೆ ಶೇಕಡಾ 0.2ರಷ್ಟು ಇಳಿಕೆ ಕಂಡು 1,803.33 ಡಾಲರ್ ಪ್ರತಿ ಔನ್ಸ್ ಆಗಿದೆ.
ಜಾಗತಿಕ ಹಣದುಬ್ಬರದ ಬಗ್ಗೆ ಹೆಚ್ಚುತ್ತಿರುವ ಆತಂಕಗಳು ಮತ್ತು ಯುಎಸ್, ಯುರೋಪ್ ಮತ್ತು ಆಗ್ನೇಯ ಏಷ್ಯಾದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು ಮತ್ತೊಮ್ಮೆ ಚಿನ್ನದ ಮೇಲೆ ಹೂಡಿಕೆ ಮಾಡಲು, ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ದೀಪಾವಳಿ 2021 ರ ವೇಳೆಗೆ ಅಮೂಲ್ಯವಾದ ಲೋಹವು 10 ಗ್ರಾಂಗೆ 52,500 ವರೆಗೆ ಹೋಗುವ ಸಾಧ್ಯತೆಯಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಮುಂದಿನ ವಾರ ನಡೆಯಲಿರುವ ಫೆಡ್‌ನ ನೀತಿ ಸಭೆಯ ಫಲಿತಾಂಶ ಚಿನ್ನದ ಮೇಲೆ ಪರಿಣಾಮ ಎಂದು ತಜ್ಞರು ಹೇಳಿದ್ದಾರೆ. ಜುಲೈ ನಂತರ ಚಿನ್ನವು ದುಬಾರಿಯಾಗುವ ಸಾಧ್ಯತೆಯಿದೆ. ಹಾಗಾಗಿ ಈಗ್ಲೇ ಚಿನ್ನದಲ್ಲಿ ಹೂಡಿಕೆ ಮಾಡುವುದು ಉತ್ತಮ ಎಂದು ತಜ್ಞರು ಹೇಳಿದ್ದಾರೆ.