ಸಾಲು ಸಾಲು ಹಬ್ಬಗಳ ಬೆನ್ನಲ್ಲೇ ಚಿನ್ನದ ಆಭರಣ ತಯಾರಕರಿಗೆ ಸರ್ಕಾರ ತಾತ್ಕಾಲಿಕ ರಿಲೀಫ್ ನೀಡಿದೆ. ಚಿನ್ನದ ಹಾಲ್ಮಾರ್ಕಿಂಗ್ಗಳಿಗೆ ನೀಡಲಾಗಿದ್ದ ಗಡುವನ್ನು ಸರ್ಕಾರವು 3 ತಿಂಗಳುಗಳ ಕಾಲ ವಿಸ್ತರಿಸಿದೆ. ಈ ಹಿಂದೆ ಆಗಸ್ಟ್ 31ರವರೆಗೆ ಗಡುವು ನೀಡಲಾಗಿತ್ತು. ಆದರೆ ಇದೀಗ ಹಾಲ್ ಮಾರ್ಕಿಂಗ್ ಗಡುವನ್ನು ನವೆಂಬರ್ 30ರವರೆಗೆ ವಿಸ್ತರಿಸಿದೆ.
ಹಾಲ್ ಮಾರ್ಕಿಂಗ್ ನಿಯಮಾವಳಿಗಳಿಂದ ಆಭರಣ ತಯಾರಿಕರಿಗೆ ಆಗುವ ದೊಡ್ಡ ಸಮಸ್ಯೆ ಅಂದರೆ ಹೆಚ್ಯುಐಡಿ ಸಂಖ್ಯೆಯನ್ನು ಬಳಸಿ ಹಾಲ್ ಮಾರ್ಕಿಂಗ್ ಮಾಡಿದಾಗ ಅದು ಅಧಿಕೃತವಾಗಿ ನೋಂದಣಿ ಆಗಲಿದೆ. ಈಗಾಗಲೇ ನೋಂದಣಿಯಾದ ಆಭರಣದ ವಿನ್ಯಾಸದಲ್ಲಿ ಬದಲಾವಣೆ ಮಾಡುವುದು ಅಂದರೆ ಇನ್ನಷ್ಟು ಚಿನ್ನವನ್ನು ಸೇರಿಸಬೇಕು ಎಂದು ಬಯಸಿದ ಸಂದರ್ಭದಲ್ಲಿ ಅದನ್ನು ಮತ್ತೆ ನೋಂದಣಿ ಮಾಡಬೇಕು. ಇದು ಆಭರಣ ತಯಾರಕರಿಗೆ ಕಿರಿಕಿರಿ ಎನಿಸಲಿದೆ. ಹೀಗಾಗಿ ಕೆಲ ಆಭರಣ ತಯಾರಕ ಘಟಕಗಳಿಗೆ ಹಾಲ್ಮಾರ್ಕಿಂಗ್ನಿಂದ ವಿನಾಯ್ತಿ ನೀಡಲಾಗಿದೆ.
ವಾರ್ಷಿಕ 40 ಲಕ್ಷ ರೂಪಾಯಿವರೆಗೆ ಆದಾಯ ಹೊಂದಿರುವ ಚಿನ್ನದ ಮಳಿಗೆಗಳು ಈ ಹಾಲ್ ಮಾರ್ಕಿಂಗ್ ನಿಯಮಾವಳಿಗಳಿಂದ ವಿನಾಯ್ತಿ ಪಡೆದಿವೆ. ಈ ವಿನಾಯ್ತಿಯು ವ್ಯಾಪಾರ ನೀತಿ ಹಾಗೂ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಆಭರಣ ರಫ್ತು ಹಾಗೂ ಆಮದು ಮಾಡುವ ಘಟಕಗಳಿಗೂ ಇದು ಸಂಬಂಧ ಹೊಂದಿದೆ. ಅಂತಾರಾಷ್ಟ್ರೀಯ ಪ್ರದರ್ಶನಗಳ ವೇಳೆ ಬಿ2ಬಿ ದೇಶಿ ಆಭರಣ ಪ್ರದರ್ಶನಗಳಿಗೆ ಕಡ್ಡಾಯ ಹಾಲ್ ಮಾರ್ಕಿಂಗ್ನಿಂದ ವಿನಾಯ್ತಿ ಸಿಗಲಿದೆ.
ಪ್ರಸ್ತುತ ಇರುವ ನಿಯಮಾವಳಿಗಳ ಪ್ರಕಾರ 256 ಜಿಲ್ಲೆಗಳಲ್ಲಿ ಕಡ್ಡಾಯವಾಗಿ ಹಾಲ್ ಮಾರ್ಕಿಂಗ್ ಅನ್ವಯವಾಗಲಿದೆ. ಹೆಚ್ಚುವರಿ 20,23 ಹಾಗೂ 24 ಕ್ಯಾರಟ್ ಚಿನ್ನಗಳಿಗೆ ಹಾಲ್ ಮಾರ್ಕಿಂಗ್ಗೆ ಅನುಮತಿಸಲಾಗುತ್ತದೆ. ವಾಚ್ಗಳು, ಫೌಂಟೇನ್ ಪೆನ್ನು, ಪೊಲ್ಕಿಯಂತಹ ವಿಶೇಷ ಆಭರಣಗಳಿಗೆ ಹಾಲ್ ಮಾರ್ಕಿಂಗ್ನಿಂದ ವಿನಾಯ್ತಿ ನೀಡಲಾಗಿದೆ.