ವರ್ಲ್ಡ್ ಗೋಲ್ಡ್ ಕೌನ್ಸಿಲ್ ಇತ್ತೀಚೆಗೆ ಬಿಡುಗಡೆ ಮಾಡಿದ ಗೋಲ್ಡ್ ಡಿಮ್ಯಾಂಡ್ ಟ್ರೆಂಡ್ಸ್ ವರದಿ ಪ್ರಕಾರ 2022 ರಲ್ಲಿ ವರ್ಷದಿಂದ ವರ್ಷಕ್ಕೆ ಚಿನ್ನದ ಬೇಡಿಕೆಯಲ್ಲಿ ಶೇ.18 ರಷ್ಟು ಹೆಚ್ಚಳವಾಗಿದೆ. ಇದರ ಪರಿಣಾಮ 4,741 t ತಲುಪಿದ್ದು, 2011 ರ ನಂತರ ಅತ್ಯಧಿಕ ಬೇಡಿಕೆ ಬಂದಿರುವುದು ಇದೇ ಮೊದಲು. ದಾಖಲೆಯ ನಾಲ್ಕನೇ ತ್ರೈಮಾಸಿಕದಿಂದ ಹೆಚ್ಚಿದ ಚಿನ್ನದ ಬೇಡಿಕೆಯು ಸೆಂಟ್ರಲ್ ಬ್ಯಾಂಕ್ –ಖರೀದಿ ಮತ್ತು ನಿರಂತರವಾದ ಬಲವಾದ ಚಿಲ್ಲರೆ ಹೂಡಿಕೆಯಲ್ಲಿ ಹೆಚ್ಚಳ ಕಂಡುಬಂದಿದೆ.
2022 ರಲ್ಲಿ ವಾರ್ಷಿಕ ಸೆಂಟ್ರಲ್ ಬ್ಯಾಂಕ್ ಬೇಡಿಕೆ 1,136 t ಗೆ ದ್ವಿಗುಣವಾಗಿದ್ದು, ಈ ಹಿಂದಿನ ವರ್ಷದಲ್ಲಿ ಇದರ ಪ್ರಮಾಣ 450t ಇತ್ತು ಮತ್ತು ಇದು 55 ವರ್ಷಗಳಲ್ಲಿ ದಾಖಲೆಯ ಏರಿಕೆಯಾಗಿದೆ. 2022 ರ 4 ನೇ ತ್ರೈಮಾಸಿಕವೊಂದರಲ್ಲಿಯೇ 417 t ತಲುಪಿದ್ದು, 2022 ರ ದ್ವಿತೀಯಾರ್ಧದಲ್ಲಿ 800 t ಗೂ ಅಧಿಕ ಖರೀದಿಯಾಗಿದೆ.
2022 ರಲ್ಲಿನ ಹೂಡಿಕೆ ಬೇಡಿಕೆ (OTC ಹೊರತುಪಡಿಸಿ) ಅದರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.10 ರಷ್ಟು ಹೆಚ್ಚಳ ಕಂಡಿದೆ. ಈ ಹೆಚ್ಚಳಕ್ಕೆ ಎರಡು ಪ್ರಮುಖ ಅಂಶಗಳಿವೆ:- ಇಟಿಎಫ್ ಹೊರಹರಿವಿನಲ್ಲಿ ಗಮನಾರ್ಹವಾದ ಇಳಿಕೆಯಾಗಿರುವುದು ಮತ್ತು ಚಿನ್ನದ ಗಟ್ಟಿ ಹಾಗೂ ನಾಣ್ಯಕ್ಕೆ ಬೇಡಿಕೆ ಹೆಚ್ಚಳವಾಗಿರುವುದು.
ಚಿನ್ನದ ಗಟ್ಟಿ ಮತ್ತು ನಾಣ್ಯಗಳು ವಿಶ್ವದಾದ್ಯಂತ ಹಲವಾರು ದೇಶಗಳಲ್ಲಿ ಹೂಡಿಕೆದಾರರ ಪರವಾಗಿದ್ದವು. ಇದು ಚೀನಾದಲ್ಲಿನ ಆರ್ಥಿಕ ದೌರ್ಬಲ್ಯವನ್ನು ಸರಿದೂಗಿಸಲು ನೆರವಾಗಿದೆ. 2022 ರ ಒಟ್ಟು ಯೂರೋಪಿಯನ್ ಚಿನ್ನದ ಗಟ್ಟಿ(ಬಾರ್) ಮತ್ತು ನಾಣ್ಯಗಳ ಹೂಡಿಕೆಯ 300t ಯ ಗಡಿ ದಾಟಿದೆ. ಇದು ನಿರಂತರವಾಗಿ ದೃಢವಾದ ಜರ್ಮನ್ ಬೇಡಿಕೆಯಿಂದ ನೆರವಾಗಿದೆ. ಮಧ್ಯಪ್ರಾಚ್ಯದಲ್ಲಿಯೂ ಸಹ ಗಮನಾರ್ಹವಾದ ಬೆಳವಣಿಗೆ ಕಂಡುಬಂದಿದೆ. ಇಲ್ಲಿ ವಾರ್ಷಿಕ ಬೇಡಿಕೆಯು ವರ್ಷದಿಂದ ವರ್ಷಕ್ಕೆ ಶೇ.42 ರಷ್ಟು ಹೆಚ್ಚಳವಾಗಿದೆ.
ಇನ್ನು 2022 ರಲ್ಲಿ ಆಭರಣ ಬೇಡಿಕೆಯಲ್ಲಿ ಸ್ವಲ್ಪಮಟ್ಟಿನ ಇಳಿಕೆ ಕಂಡುಬಂದಿದೆ. ಈ ವಿಭಾಗದಲ್ಲಿ ಶೇ.3 ರಷ್ಟು ಇಳಿಕೆ ಉಂಟಾಗಿದ್ದು, ಒಟ್ಟಾರೆ 2,086t ಗೆ ಬಂದು ನಿಂತಿತ್ತು. ಇದಕ್ಕೆ ಪ್ರಮುಖ ಕಾರಣ ಚೀನಾದ ವಾರ್ಷಿಕ ಆಭರಣ ಬೇಡಿಕೆಯಲ್ಲಿ ಇಳಿಕೆಯಾಗಿರುವುದು. ವರ್ಷದ ಬಹುತೇಕ ಸಮಯದವರೆಗೆ ಚೀನಾದಲ್ಲಿ ಕೋವಿಡ್-19 ಲಾಕ್ಡೌನ್ ನಿಂದಾಗಿ ಗ್ರಾಹಕ ಚಟುವಟಿಕೆಗಳು ಶೇ.15 ರಷ್ಟು ಇಳಿಕೆಯಾಗಿತ್ತು. ಅದೇ ರೀತಿ 4 ನೇ ತ್ರೈಮಾಸಿಕದಲ್ಲಿ ಚಿನ್ನದ ದರ ಹೆಚ್ಚಳವಾಗಿದ್ದರಿಂದ ಆಭರಣ ಬೇಡಿಕೆಯಲ್ಲಿ ವಾರ್ಷಿಕ ಇಳಿಕೆ ಕಂಡುಬಂದಿದೆ.
2022 ರಲ್ಲಿನ ಒಟ್ಟು ವಾರ್ಷಿಕ ಪೂರೈಕೆ ಶೇ.2 ರಷ್ಟು ಹೆಚ್ಚಳವಾಗಿದ್ದು, 4,755t ನಷ್ಟು ಪೂರೈಕೆಯಾಗಿದೆ. ಇನ್ನು ಮೈನ್ ಉತ್ಪಾದನೆಯಲ್ಲಿ ಏರಿಕೆ ಉಂಟಾಗಿದ್ದು, ನಾಲ್ಕು ವರ್ಷಗಳ ಹೆಚ್ಚಳಕ್ಕೆ ಕಾರಣವಾಗಿದೆ. ಇದರ ಪರಿಣಾಮ 3,612t ಗೆ ತಲುಪಿದೆ.