ಗೋಕರ್ಣ: ಪ್ರವಾಸಕ್ಕೆಂದು ಬಂದು ಈಜಲು ಹೋಗಿ ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ರಕ್ಷಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಕಡಲ ತೀರದಲ್ಲಿ ನಡೆದಿದೆ.
ಮೈಸೂರು ಮೂಲದ ಅಭಿ ಹಾಗೂ ಆತನ ಸ್ನೇಹಿತನನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ. ರಜೆ ಹಿನ್ನೆಲೆಯಲ್ಲಿ ಇಬ್ಬರು ಸ್ನೇಹಿತರು ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಸಮುದ್ರದ ನೀರಿನಲ್ಲಿ ಈಜಲು ಇಳಿದಿದ್ದಾರೆ. ಅಲೆಗಳ ಹೊಡೆತಕ್ಕೆ ಸಿಲುಕಿ ಇಬ್ಬರೂ ನೀರಿನಲ್ಲಿ ಮುಳುಗುತ್ತಿದ್ದರು.
ಇದನ್ನು ಗಮನಿಸಿದ ಲೈಫ್ ಗಾರ್ಡ್ ಸಿಬ್ಬಂದಿ ಶಿವಪ್ರಸಾದ್ ಹಾಗೂ ಮೋಹನ್ ಎಂಬುವವರು ಇಬ್ಬರನ್ನೂ ರಕ್ಷಿಸಿದ್ದಾರೆ. ಗೋಕರ್ಣ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.