ಕಾರವಾರ: ಪ್ರವಾಸಕ್ಕೆಂದು ಬಂದಿದ್ದ ವಿದ್ಯಾರ್ಥಿಗಳು ಸಮುದ್ರದಲ್ಲಿ ಈಜಲು ಇಳಿದಿದ್ದ ವೇಳೆ ನೀರು ಪಾಲಾಗಿದ್ದು, ಐವರು ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ. ಮತ್ತೋರ್ವ ವಿದ್ಯಾರ್ಥಿ ನಾಪತ್ತೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಬಾವಿಕೊಡ್ಲ ಕಡಲ ತೀರದಲ್ಲಿ ನಡೆದಿದೆ.
ಕೋಲಾರ ಮೂಲದ ವಿನಯ್ ಎಸ್.ವಿ.(22) ನಾಪತ್ತೆಯಾಗಿರುವ ವಿದ್ಯಾರ್ಥಿ. ಬೆಂಗಳೂರಿನ ಹಿಲ್ ಸೈಡ್ ಫಾರ್ಮಸಿ ಕಾಲೇಜಿನ 48 ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಗೋಕರ್ಣಕ್ಕೆ ಬಂದಿದ್ದರು. ಈ ವೇಳೆ ಕೆಲ ವಿದ್ಯಾರ್ಥಿಗಳು ಸಮುದ್ರದಲ್ಲಿ ಈಜಲು ತೆರಳಿದ್ದಾರೆ. ಸಮುದ್ರದ ಅಲೆಗಳ ರಭಸಕ್ಕೆ ಸಿಲುಕಿ ವಿದ್ಯಾರ್ಥಿಗಳು ಕೊಚ್ಚಿ ಹೋಗುತ್ತಿದ್ದರು. ಕರಾವಳಿ ಕಾವಲುಪಡೆ ಸಿಬ್ಬಂದಿಗಳು ಐವರು ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ.
ಆದರೆ ಮತ್ತೋರ್ವ ವಿದ್ಯಾರ್ಥಿ ನಾಪತ್ತೆಯಾಗಿದ್ದಾನೆ. ಆತನಿಗಾಗಿ ಸಮುದ್ರದಲ್ಲಿ ತೀವ್ರ ಶೋಧಕಾರ್ಯ ನಡೆಸಲಾಗಿದೆ. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.