ಬೆಳಗಾವಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಗೋಕಾಕ್ ಫಾಲ್ಸ್ ಒಂದಾಗಿದೆ. ಕರ್ನಾಟಕದ ನಯಾಗರಾ ಎಂದೇ ಗೋಕಾಕ್ ಫಾಲ್ಸ್ ಅನ್ನು ಕರೆಯಲಾಗುತ್ತದೆ. ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿ ಜಲಪಾತದ ವೈಭವವನ್ನು ಕಣ್ತುಂಬಿಕೊಳ್ಳುತ್ತಾರೆ.
ಬೆಳಗಾವಿಯಿಂದ ಸುಮಾರು 58 ಕಿಲೋ ಮೀಟರ್ ದೂರದಲ್ಲಿ ಗೋಕಾಕ್ ಪಟ್ಟಣವಿದ್ದು, ಅಲ್ಲಿಂದ 5-6 ಕಿಲೋ ಮೀಟರ್ ಸಾಗಿದಲ್ಲಿ ಫಾಲ್ಸ್ ಸಿಗುತ್ತದೆ. ಜುಲೈನಿಂದ ಸೆಪ್ಟಂಬರ್ ತಿಂಗಳ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಮಳೆಗಾಲದಲ್ಲಿ ಕೆಂಪಾದ ನೀರಿನಿಂದ ಹರಿದು ಬರುವ ಘಟಪ್ರಭಾ, ಗೋಕಾಕ್ ಬಳಿ ಸುಮಾರು 52 ಮೀಟರ್ ಎತ್ತರದಿಂದ ಧುಮ್ಮಿಕ್ಕಿ ಆಳವಾದ ಕಣಿವೆಗೆ ಬೀಳುತ್ತದೆ.
ಅಗಲ ಮತ್ತು ನೀರಿನ ಬಣ್ಣ ಹೊರತಾಗಿ, ಎತ್ತರ ಮತ್ತು ಭೋರ್ಗರೆದು ನೀರು ಬೀಳುವ ರೀತಿಯನ್ನು ಗಮನಿಸಿದಾಗ ಇದು ನಯಾಗರಾ ಫಾಲ್ಸ್ ನಂತೆ ಕಾಣುತ್ತದೆ. ಜಲಪಾತಕ್ಕೆ ಸಮೀಪದಲ್ಲಿ ವಿದ್ಯುತ್ ಉತ್ಪಾದನೆ ಕೇಂದ್ರ, ಉದ್ಯಾನವನ, ಜಲಪಾತ ನೋಡಲು ತೂಗು ಸೇತುವೆ ಕೂಡ ಇದ್ದು, ನೀವು ಒಮ್ಮೆ ಜಲಪಾತದ ವೈಭವ ಕಣ್ತುಂಬಿಕೊಳ್ಳಿ.