ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಪ್ರತಿ ವರ್ಷ ಮಾಡಿದ್ದೇ ತಿಂಡಿಯನ್ನು ಮಾಡಲು ನಿಮಗೂ ಬೇಸರ ಎನಿಸಬಹುದು. ಇದಕ್ಕಾಗಿ ನೀವು ಈ ಬಾರಿ ಗೋಧಿ ಉಂಡೆಯನ್ನು ಟ್ರೈ ಮಾಡಬಹುದು. ಇದು ಅತ್ಯಂತ ಸುಲಭ ಹಾಗೂ ರುಚಿಕರ ತಿನಿಸಾಗಿದ್ದು ಮಕ್ಕಳಂತೂ ಸಖತ್ ಎಂಜಾಯ್ ಮಾಡುತ್ತಾ ಸವಿಯಲಿದ್ದಾರೆ.
ಬೇಕಾಗುವ ಸಾಮಗ್ರಿಗಳು : ಗೋಧಿ ಹಿಟ್ಟು – 2 ಕಪ್, ಸಕ್ಕರೆ ಪುಡಿ – 1.5 ಕಪ್, ತುಪ್ಪ – 1 ಕಪ್, ಗೋಡಂಬಿ – 10, ಏಲಕ್ಕಿ ಪುಡಿ – ಸ್ವಲ್ಪ
ಮಾಡುವ ವಿಧಾನ : ಒಲೆಯ ಮೇಲೆ ಪಾತ್ರೆಯನ್ನು ಇಟ್ಟುಕೊಳ್ಳಿ. ಇದಕ್ಕೆ ಗೋಧಿ ಹಿಟ್ಟನ್ನು ಹಾಕಿ ಮಧ್ಯಮ ಹುರಿಯಲ್ಲಿ ಹಸಿ ವಾಸನೆ ಹೋಗುವವರೆಗೂ ಹುರಿದುಕೊಳ್ಳಬೇಕು. ಇದಾದ ಬಳಿಕ ಗೋಧಿ ಹಿಟ್ಟನ್ನು ಇನ್ನೊಂದು ಪಾತ್ರೆಗೆ ಹಾಕಿ ತಣ್ಣಗಾಗಲು ಬಿಡಿ.
ಇನ್ನೊಂದು ಪಾತ್ರೆಯಲ್ಲಿ ಸ್ವಲ್ಪ ತುಪ್ಪವನ್ನು ತೆಗೆದುಕೊಂಡು ಅದರಲ್ಲಿ ಗೋಡಂಬಿಯನ್ನು ಹುರಿದಿಟ್ಟುಕೊಳ್ಳಿ. ಗೋಧಿ ಹಿಟ್ಟು ತಣ್ಣಗಾದ ಬಳಿಕ ಮೊದಲೇ ಪುಡಿ ಮಾಡಿಟ್ಟುಕೊಂಡ ಸಕ್ಕರೆ, ತುಪ್ಪ ಹಾಗೂ ಏಲಕ್ಕಿ ಪುಡಿಯನ್ನು ಹಾಕಿ ಕಲಿಸಿ. ಉಂಡೆ ಹದಕ್ಕೆ ಬಂದ ಬಳಿಕ ಒಂದೊಂದೆ ಉಂಡೆಯನ್ನು ಮಾಡಿ. ಹುರಿದ ಗೋಡಂಬಿಯಿಂದ ಗಾರ್ನಿಷ್ ಮಾಡಿ.