ಹಿಂದೂ ದೇವಾಲಯಗಳಲ್ಲಿ ಒಂದು ಪ್ರತ್ಯೇಕವಾದ ನಂಬಿಕೆ ಮತ್ತು ಆಚಾರ – ವಿಚಾರಗಳಿವೆ. ಅದರಲ್ಲೂ ಶಕ್ತಿ ದೇವತೆಗಳ ಬಗ್ಗೆ ಅಪಾರವಾದ ಭಕ್ತಿ ಮತ್ತು ನಂಬಿಕೆಗಳು ಹೆಚ್ಚಾಗಿವೆ. ಅಂತಹದ್ದೇ ಒಂದು ಪ್ರಸಿದ್ಧವಾದ ದೇವಿಯ ಮಂದಿರದ ಬಗ್ಗೆ ಮಾಹಿತಿ ಇಲ್ಲಿದೆ.
ಹೈದರಾಬಾದ್ ನಲ್ಲಿರುವ ಸುಮಾರು 300 ವರ್ಷಗಳ ಚರಿತ್ರೆಯನ್ನು ಹೊಂದಿರುವ ಅತ್ಯಂತ ಶಕ್ತಿಯುತವಾದ ದೇವಾಲಯವೇ ಪೆದ್ದಮ್ಮ ದೇವಿ ದೇವಾಲಯ. ಜೂಬ್ಲಿ ಹಿಲ್ಸ್ ನಲ್ಲಿ ಇಂದಿಗೂ ಗ್ರಾಮ ದೇವತೆಯಾಗಿ ಈ ದೇವಿಯನ್ನು ಪೂಜಿಸುತ್ತಾರೆ. ಯಾವುದೇ ಸಮಸ್ಯೆಯಿದ್ದರೂ ಕೂಡ ಒಮ್ಮೆ ಈ ದೇವಾಲಯಕ್ಕೆ ಭೇಟಿ ನೀಡಿ ಕೋರಿಕೆಯನ್ನು ಸಲ್ಲಿಸಿ ಬಂದರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ ಎಂದು ನಂಬಲಾಗಿದೆ.
ಈ ದೇವಾಲಯಕ್ಕೆ ಒಂದು ವಿಶೇಷತೆ ಇದೆ. ನಮ್ಮ ಮನಸ್ಸಿನಲ್ಲಿ ಧೃಢವಾದ ಭಕ್ತಿಯಿಂದ ಕೋರಿಕೆಯನ್ನು ಮಾಡಿಕೊಂಡು, ಅಲ್ಲಿನ ನೆಲದ ಮೇಲೆ 1 ರೂಪಾಯಿ ನಾಣ್ಯವನ್ನು ಹಾಕಬೇಕು. ಕಾಯಿನ್ ನಿಂತುಕೊಂಡರೆ ನಮ್ಮ ಕೋರಿಕೆ ನೆರವೇರುತ್ತದೆ ಎಂಬ ನಂಬಿಕೆ ಇಲ್ಲಿದೆ. ಹಾಗೆಯೇ ದೇವಿಯ ದರ್ಶನದ ನಂತರ ಕೈಗೆ ದೇವಿಯ ಕೆಂಪು ಕಂಕಣವನ್ನು ಕಟ್ಟುತ್ತಾರೆ. ಅದನ್ನು ನೋಡಿದವರು ಪೆದ್ದಮ್ಮನ ದೇವಾಲಯಕ್ಕೆ ಭೇಟಿ ನೀಡಿದ್ದೀರಾ ಎಂದು ಕೇಳಿದರೆ ಅಚ್ಚರಿ ಪಡಬೇಕಿಲ್ಲಾ. ಏಕೆಂದರೆ ಹೈದರಾಬಾದ್ ನಲ್ಲಿಯೇ ಅತ್ಯಂತ ಪ್ರಸಿದ್ಧವಾದ ಹಾಗೂ ಶಕ್ತಿಯುತವಾದ ದೇವಾಲಯ ಇದಾಗಿದೆ.
ಪ್ರತೀ ಭಾನುವಾರ, ಶುಕ್ರವಾರ ಮತ್ತು ವಿಶೇಷ ದಿನಗಳ ಸಂದರ್ಭಗಳಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ಈ ದೇವಾಲಯಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತಾದಿಗಳು ಸೇರುತ್ತಾರೆ. ಇಲ್ಲಿಗೆ ಹೋಗಿ ತಲುಪಲು ರಾಜ್ಯದ ವಿವಿಧೆಡೆಗಳಿಂದ ಸಾರಿಗೆ ವ್ಯವಸ್ಥೆಯಿದೆ. ಖಾಸಗಿ ವಾಹನಗಳಲ್ಲೂ ಸಹ ಪ್ರಯಾಣಿಸಬಹುದು.