ಲಖ್ನೋ: ಉತ್ತರಪ್ರದೇಶದಲ್ಲಿ ನಡೆದ ವಿಲಕ್ಷಣ ಪ್ರಕರಣವೊಂದರಲ್ಲಿ ದೇವರು ಸತ್ತಿದ್ದಾನೆ ಎಂದು ಹೇಳುವ ಮೂಲಕ ದೇವರ ಜಮೀನನ್ನೇ ಕಬಳಿಸಲಾಗಿದೆ.
ಲಖ್ನೋದ ಮೋಹನ್ ಲಾಲ್ ಗಂಜ್ ಪ್ರದೇಶದ ಕುಶ್ಮೌರಾ ಹಲುವಾಪುರ ಗ್ರಾಮದ ದೇವಾಲಯಕ್ಕೆ ಸಂಬಂಧಿಸಿದ ಜಮೀನನ್ನು ದುರುಳರು ಕಬಳಿಸಿದ್ದಾರೆ. ಸುಮಾರು 100 ವರ್ಷದಷ್ಟು ಹಳೆಯದಾಗಿರುವ ಶ್ರೀಕೃಷ್ಣ -ರಾಮರ ದೇಗುಲ ಶ್ರೀಕೃಷ್ಣ -ರಾಮರ ಹೆಸರಿನಲ್ಲಿ ನೊಂದಾಯಿಸಲ್ಪಟ್ಟಿರುವ ಟ್ರಸ್ಟ್ ನಿಂದ ಈ ದೇವಾಲಯ ನಡೆಯುತ್ತಿದೆ.
ಗಯಾಪ್ರಸಾದ್ ಎಂಬ ಹೆಸರಿನಿಂದ ಕರೆಯಲ್ಪಡುವ ವ್ಯಕ್ತಿಯನ್ನು ಭಗವಾನ್ ಕೃಷ್ಣ -ರಾಮನ ತಂದೆ ಎಂದು ಭೂ ದಾಖಲೆಗಳಲ್ಲಿ ಸೇರಿಸಲಾಗಿದೆ. 1987 ರಲ್ಲಿ ನಡೆದ ಭೂ ದಾಖಲೆಗಳ ಕ್ರೋಢೀಕರಣ ನಡೆದಾಗ, ದೇವರಾದ ಶ್ರೀಕೃಷ್ಣ ರಾಮ ಸತ್ತನೆಂದು ಘೋಷಿಸಲಾಗಿದೆ. ತರುವಾಯ ಆಸ್ತಿಯನ್ನು ಗಯಾಪ್ರಸಾದ್ ಅವರಿಗೆ ವರ್ಗಾವಣೆ ಮಾಡಲಾಗಿದೆ.
1991 ರಲ್ಲಿ ಗಯಾಪ್ರಸಾದ್ ಮೃತಪಟ್ಟನೆಂದು ಘೋಷಿಸಿದ್ದು ಆಸ್ತಿಯನ್ನು ರಾಮನಾಥ್ ಮತ್ತು ಹರಿದ್ವಾರ್ ಎಂದು ಹೆಸರಿಸಲಾದ ಸಹೋದರರಿಗೆ ವರ್ಗಾವಣೆ ಮಾಡಲಾಗಿದೆ. 25 ವರ್ಷಗಳ ನಂತರ ದೇವಾಲಯದ ಮೂಲ ಟ್ರಸ್ಟಿ ಸುಶೀಲ್ ಕುಮಾರ್ ತ್ರಿಪಾಠಿ 2016ರಲ್ಲಿ ನಾಯಬ್ ತಹಶೀಲ್ದಾರ್ ಅವರಿಗೆ ದೂರು ನೀಡಿದಾಗ ಈ ವಿಷಯ ಬೆಳಕಿಗೆ ಬಂದಿದೆ.
ನಾಯಬ್ ತಹಶೀಲ್ದಾರ್ ಕಚೇರಿಯಿಂದ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಉಪಮುಖ್ಯಮಂತ್ರಿ ಕಚೇರಿವರೆಗೂ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಭೂಮಿಯ ಕಬಳಿಸಲು ಹಲವರ ಹೆಸರಿಗೆ ಬದಲಾವಣೆ ಮಾಡಿ ವಂಚಿಸಲಾಗಿದೆ. ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಅವರು ತನಿಖೆಗೆ ಆದೇಶಿಸಿದ್ದು, ಮೂಲತಃ ಟ್ರಸ್ಟನ್ನು ನೊಂದಾಯಿಸಿದ ವ್ಯಕ್ತಿಯ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎನ್ನುವುದು ತಿಳಿದುಬಂದಿದೆ.
ಎಸ್ಡಿಎಂ ಸದರ್ ಪ್ರಫುಲ ಕುಮಾರ್ ತ್ರಿಪಾಠಿ ಅವರ ಪ್ರಕಾರ, ದೇವಾಲಯ ಮತ್ತು ಜಮೀನು ಎರಡನ್ನು ಹಿಂದೆ ಶ್ರೀ ಕೃಷ್ಣ -ರಾಮನ ಹೆಸರಲ್ಲಿ ನೋಂದಾಯಿಸಲಾಗಿದೆ. ಆದರೆ, ದೇವರ ಬದಲಿಗೆ ವ್ಯಕ್ತಿ ಎಂದು ಹೆಸರಿಸಿ ಮೃತಪಟ್ಟಿರುವುದಾಗಿ ಜಮೀನನ್ನು ಬೇರೆಯವರ ಹೆಸರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ವಿವಾದ ಕೋರ್ಟ್ ಮೆಟ್ಟಿಲೇರಿದ್ದು ವಿಚಾರಣೆಯ ಹಂತದಲ್ಲಿದೆ.