ಗೋಬಿ ಮಂಚೂರಿ ಮಕ್ಕಳ ಪಾಲಿನ ಫೇವರಿಟ್ ಪುಡ್. ಆದರೆ ಈಗ ಅಂಗಡಿಗಳಲ್ಲಿ ಸಿಗುವ ಗೋಬಿ ಮಂಚೂರಿಯಲ್ಲಿ ಆರೋಗ್ಯಕ್ಕೆ ಮಾರಕವಾದ ಕೃತಕ ಬಣ್ಣ ಬೆರೆಸಲಾಗುತ್ತೆ. ಹೀಗಾಗಿ ಅವುಗಳ ಅತಿಯಾದ ಸೇವನೆ ಒಳ್ಳೆಯದಲ್ಲ.
ನೀವು ಕೊಂಚ ಶ್ರಮ ವಹಿಸಿದರೆ ಮನೆಯಲ್ಲೇ ಸುಲಭವಾಗಿ ರುಚಿಯಾದ ಹಾಗೂ ಆರೋಗ್ಯ ಪೂರ್ಣವಾದ ಗೋಬಿ ಮಂಚೂರಿ ಸಿದ್ದಪಡಿಸಬಹುದು.
ಬೇಕಾಗುವ ವಸ್ತುಗಳು : ಸ್ವಚ್ಛಗೊಳಿಸಿದ ಒಂದು ಬೌಲ್ ಗೋಬಿ, ಅರ್ಧ ಬೌಲ್ ಕಾರ್ನ್ ಪ್ಲೋರ್, 8-10 ಬಿಡಿಸಿದ ಬೆಳ್ಳುಳ್ಳಿ, ಕಾಲು ಕಪ್ ಹೆಚ್ಚಿದ ಈರುಳ್ಳಿ, ಚಿಕ್ಕದಾಗಿ ಹೆಚ್ಚಿದ ಶುಂಠಿಯ ತುಣುಕು 5-6, 4-5 ಹೆಚ್ಚಿದ ಹಸಿಮೆಣಸಿನ ಕಾಯಿ, ಅರ್ಧ ಕಪ್ ಹೆಚ್ಚಿದ ದೊಣ್ಣೆ ಮೆಣಸಿನ ಕಾಯಿ, 4-5 ಸ್ಪೂನ್ ಟೊಮೆಟೋ ಸಾಸ್, 2-3 ಸ್ಪೂನ್ ಚಿಲ್ಲಿ ಸಾಸ್, 2 ಸ್ಪೂನ್ ಸೋಯಾ ಸಾಸ್. ಕರಿಯಲು ಅಗತ್ಯವಿರುವಷ್ಟು ಎಣ್ಣೆ. ರುಚಿಗೆ ತಕ್ಕಷ್ಟು ಉಪ್ಪು, ಗೋಬಿ ಅಲಂಕರಿಸಲು ಕೊತ್ತಂಬರಿ ಸೊಪ್ಪು.
ಮಾಡುವ ವಿಧಾನ : ಮೊದಲಿಗೆ ಸ್ವಚ್ಛಗೊಳಿಸಿದ ಗೋಬಿ ಪೀಸ್ ಗಳನ್ನು ಬಿಸಿ ನೀರಿಗೆ ಹಾಕಿ 10 ನಿಮಿಷ ಮಂದ ಉರಿಯಲ್ಲಿ ಬೇಯಿಸಿ, ಆರಿಸಿಕೊಳ್ಳಿ. ಬೌಲ್ಗೆ ಕಾರ್ನ್ ಪ್ಲೋರ್ ಹಾಕಿ, ಅಗತ್ಯವಿರುವಷ್ಟು ಉಪ್ಪು ಹಾಕಿ, ತೆಳುವಾಗಿ ಕಲೆಸಿಕೊಳ್ಳಿ. ಬಳಿಕ ಈ ಮಿಶ್ರಣಕ್ಕೆ ಗೋಬಿ ಪೀಸ್ ಗಳನ್ನು ಹಾಕಿ ಕಲೆಸಿ, ಎಣ್ಣೆಯಲ್ಲಿ ಕರಿದು ಎತ್ತಿಡಿ. ಬಳಿಕ ಒಂದು ಅಗಲವಾದ ಬಾಣಲೆಗೆ ಎಣ್ಣೆ ಹಾಕಿ, ಎಣ್ಣೆ ಕಾದೊಡನೆ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು, ಈರುಳ್ಳಿ, ದೊಣ್ಣೆ ಮೆಣಸು ಒಂದೊಂದಾಗಿ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಈರುಳ್ಳಿಯನ್ನು ಎಣ್ಣೆಯಲ್ಲಿ ಹುರಿದ ಬಳಿಕ ಇದಕ್ಕೆ ಕರಿದ ಗೋಬಿ ಸೇರಿಸಿ ಹುರಿಯಿರಿ.
ಹುರಿಯುವಾಗ ಟೊಮೆಟೋ ಸಾಸ್, ಚಿಲ್ಲಿ ಸಾಸ್ಸೇರಿಸಿ, ಕೊನೆಯಲ್ಲಿ ಸೋಯಾ ಸಾಸ್ ಬೆರೆಸಿ, ಚೆನ್ನಾಗಿ ಹುರಿದು ಕೆಳಗಿಳಿಸಿ. ಹೆಚ್ಚಿದ ಕೊತ್ತಂಬರಿ ಸೊಪ್ಪು ಉದುರಿಸಿ ಸವಿಯಲು ಕೊಡಿ. ಇದಕ್ಕೆ ಯಾವುದೇ ಬಣ್ಣ ಸೇರಿಸದೇ ಮನೆಯಲ್ಲೇ ತಯಾರಿಸಿರೋದರಿಂದ ಯಾವುದೇ ಅನಾರೋಗ್ಯದ ಭಯವಿಲ್ಲ.