ಉತ್ತರ ಗೋವಾದಲ್ಲಿ ನಡೆದ ಪ್ಯಾರಾಗ್ಲೈಡಿಂಗ್ ಅಪಘಾತದಲ್ಲಿ 27 ವರ್ಷದ ಪ್ರವಾಸಿ ಮತ್ತು ಆಕೆಯ ಇನ್ ಸ್ಟ್ರಕ್ಟರ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇರಿ ಗ್ರಾಮದಲ್ಲಿ ಸಂಜೆ 4:30 ರಿಂದ 5 ಗಂಟೆಯ ನಡುವೆ ಪ್ಯಾರಾಗ್ಲೈಡರ್ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಕಂದರಕ್ಕೆ ಬಿದ್ದಾಗ ಈ ಘಟನೆ ಸಂಭವಿಸಿದೆ. ಬಲಿಯಾದವರನ್ನು ಪುಣೆ ನಿವಾಸಿ ಶಿವಾನಿ ದಬಾಲೆ ಮತ್ತು ನೇಪಾಳ ಮೂಲದ 26 ವರ್ಷದ ಬೋಧಕಿ ಸುಮನ್ ನೇಪಾಳಿ ಎಂದು ಗುರುತಿಸಲಾಗಿದೆ.
ಸ್ನೇಹಿತನೊಂದಿಗೆ ಗೋವಾಕ್ಕೆ ಭೇಟಿ ನೀಡಿದ್ದ ದಬಾಲೆ, ಅನುಮತಿಯಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಸಾಹಸ ಕ್ರೀಡಾ ಕಂಪನಿಯಿಂದ ಪ್ಯಾರಾಗ್ಲೈಡಿಂಗ್ ಸೇವೆಗಳನ್ನು ಪಡೆದಿದ್ದರು. ಹಾರಾಟದ ಸಮಯದಲ್ಲಿ, ಪ್ಯಾರಾಗ್ಲೈಡರ್‌ನಲ್ಲಿ ಹಗ್ಗ ತುಂಡಾಗಿ, ಇಬ್ಬರೂ ಬಂಡೆಗಳಿಗೆ ಡಿಕ್ಕಿ ಹೊಡೆದರು. ಇಬ್ಬರಿಗೂ ತೀವ್ರ ಪೆಟ್ಟಾಗಿದ್ದು, ಗೋವಾ ವೈದ್ಯಕೀಯ ಕಾಲೇಜಿಗೆ(GMC) ಆಗಮಿಸುವಾಗಲೇ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಅವರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ಘಟನೆಯ ತನಿಖೆ ನಡೆಯುತ್ತಿದೆ.
ಮಂಡ್ರೆಮ್ ಪೊಲೀಸರು ಹೈಕ್ ‘ಎನ್’ ಫ್ಲೈ ಕಂಪನಿಯ ಮಾಲೀಕ ಶೇಖರ್ ರೈಜಾದಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ರೈಜಾದಾ ಅನುಮತಿ ಪಡೆಯದೇ ಪ್ಯಾರಾಗ್ಲೈಡಿಂಗ್ ನಡೆಸುತ್ತಿದ್ದರು. ಆರ್ಥಿಕ ಲಾಭಕ್ಕಾಗಿ ಜೀವಗಳಿಗೆ ಅಪಾಯವನ್ನುಂಟುಮಾಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಟಿಕಮ್ ಸಿಂಗ್ ವರ್ಮಾ ಹೇಳಿದ್ದಾರೆ.