ಪಣಜಿ: ಗೋವಾದಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಅರಂಬೋಲ್ ಬೀಚ್ ನಲ್ಲಿ ಬ್ರಿಟನ್ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳೆದ ವಾರ ಆರಂಬೋಲ್ ಗ್ರಾಮದ ಸಿಹಿನೀರಿನ ಸರೋವರದಲ್ಲಿ 42 ವರ್ಷದ ಬ್ರಿಟಿಷ್ ಪ್ರಜೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಅರಂಬೋಲ್ ನಿವಾಸಿ ಜೋಯಲ್ ಡಿಸೋಜಾ ಎಂಬಾತನನ್ನು ಪೆರ್ನೆಂ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಸಂತ್ರಸ್ಥೆ ಮತ್ತು ಆಕೆಯ ಪತಿ ಗುರುವಾರ ಬೀಚ್ ಗೆ ಹೋಗಿದ್ದರು. ತನ್ನ ಹೆಂಡತಿಗೆ “ಮುಲ್ತಾನ್ ಮಣ್ಣಿನ” ಮಸಾಜ್ ಮಾಡುವಂತೆ ಪತಿ ಡಿಸೋಜಾ(32)ಗೆ ಕೇಳಿದ್ದಾನೆ. ಡಿಸೋಜಾ ಮಸಾಜ್ ಪ್ರಾರಂಭಿಸಿ ಮಹಿಳೆಯ ಖಾಸಗಿ ಅಂಗಗಳನ್ನು ಮುಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ಎರಡು ದಿನಗಳ ನಂತರ ಘಟನೆಯ ಬಗ್ಗೆ ತನ್ನ ಪತಿಗೆ ತಿಳಿಸಿದ್ದು, ಬ್ರಿಟಿಷ್ ಹೈಕಮಿಷನ್ ಸಂಪರ್ಕಿಸಿದ್ದಾಳೆ. ಅವರು ತಕ್ಷಣ ಗೋವಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಮಹಿಳೆ ಸಂಪರ್ಕಿಸಿ ಎಫ್‌ಐಆರ್ ದಾಖಲಿಸಿದ ಬಳಿಕ ಡಿಸೋಜಾನನ್ನು ಬಂಧಿಸಲಾಗಿದೆ ಎಂದು ಪೆರ್ನೆಂ ಪಿಐ ವಿಕ್ರಂ ನಾಯ್ಕ ತಿಳಿಸಿದ್ದಾರೆ. ಡಿವೈಎಸ್ಪಿ ಸಿದ್ಧಾಂತ ಶಿರೋಡ್ಕರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.